ಬೆಂಗಳೂರು: ಕೇಂದ್ರ ಸರ್ಕಾರ ಸಕ್ಕರೆ ದರವನ್ನು ಹೆಚ್ಚಳ ಮಾಡುವುದಕ್ಕೆ ನಿರ್ಧಾರ ಮಾಡಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಇಬ್ಬರು ಸ್ವಾಗತಿಸಿದ್ದಾರೆ. ಹಲವು ವರ್ಷಗಳಿಂದ ಸಕ್ಕರೆ ದರ ಹೆಚ್ಚಳವಾಗಿರಲಿಲ್ಲ. ನಾವೂ ಕೂಡ ಬೇಡಿಕೆಯನ್ನು ಇಡುತ್ತಲೇ ಬಂದಿದ್ದೆವು. ಪ್ರತಿ ಕೆಜಿಗೆ 31 ರೂಪಾಯಿ ಇತ್ತು, 41 ರೂಪಾಯಿ ಹೆಚ್ಚಳ ಮಾಡುವುದಕ್ಕೆ ನಾವೂ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರ 40 ರೂಪಾಯಿ ಮಾಡುವುದಕ್ಕೆ ಚಿಂತನೆ ನಡೆಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಸಕ್ಕರೆ ದರ ಸೇರಿದಂತೆ ಮೊಲಾಸಸ್ ದರ ನಿಗದಿ ಮಾಡುವುದು ಹೀಗೆ ದರ ನಿಗದಿ ಮಾಡುವುದರ ವಿಚಾರವನ್ನು ನಿರ್ಧಾರ ಮಾಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು. ಸದ್ಯ ಸಕ್ಕರೆ ದರ ಹೆಚ್ಚಳ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಬಹಳ ಸಂತಸದ ವಿಚಾರ. ಪ್ರಹ್ಲಾದ್ ಜೋಶಿ ಅವರಿಗೂ ಬಿಸಿಯ ಅರಿವಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಗಲಾಟೆ ಮಾಡಿದ್ದಾರೆ. ದರ ಹೆಚ್ಚಳ ಮಾಡಿ ಹತ್ತು ವರ್ಷವಾಗಿದೆ ಅಂತ ಗಲಾಟೆ ಮಾಡಿದ್ದಾರೆ. ಅದನ್ನ ನಾವೂ ಕೂಡ ಪ್ರಧಾನಿಗೆ ಮನವಿ ಮಾಡಿದ್ದೇವೆ. ರೈತರಿಗೂ ಒಳ್ಳೆಯದಾಗಬೇಕು, ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಇಲ್ಲಿ ಒಳ್ಳೆಯದಾಗಬೇಕು. ರೈತರು ಇದ್ದರೆ ಫ್ಯಾಕ್ಟರಿ.. ಫ್ಯಾಕ್ಟರಿ ಇದ್ದರೆ ರೈತರು. ಹೀಗಾಗಿ ಇಬ್ಬರಿಗೂ ಒಳ್ಳೆಯದಾಗಬೇಕು. ಉದ್ಯಮ ಕೂಡ ನಡೆಯಬೇಕಾಗಿರುವ ಕಾರಣ ಇದೆಲ್ಲವನ್ನು ತೀರ್ಮಾನ ಮಾಡುವುದು ಕೇಂದ್ರ ಸರ್ಕಾರ ಎಂಬ ಮಾತನ್ನ ಹೇಳಿದ್ದಾರೆ.

ಸದ್ಯ ಅಂಗಡಿಯಲ್ಲಿ ಸಕ್ಕರೆ ಕೊಳ್ಳುವಾಗ ಈಗಿನ ಬೆಲೆಯೇ 41 ರೂಪಾಯಿ ಇದೆ. ಈಗ ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡಿದ್ರೆ ಗ್ರಾಹಕರಿಗೆ ಹೊರೆ ಎಷ್ಟಾಗುತ್ತೆ ಎಂಬುದೆಲ್ಲವನ್ನು ನೋಡಬೇಕಿದೆ.
















