ದಾವಣಗೆರೆ : ದಾವಣಗೆರೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬ್ಯಾಡಗಿ ಮತ್ತು ಹಾವೇರಿ ರೈಲು ನಿಲ್ದಾಣಗಳ ನಡುವೆ ರೈಲುಗಳ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ. ತನಿಖೆಯ ವೇಳೆ ಮೂವರು ಬಾಲಕರನ್ನು ಗುರುತಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಮೇ 30ರಂದು ರೈಲು ಸಂಖ್ಯೆ 26752 ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ವಿಶೇಷ ನಿಗಾವಹಿಸುವ ಕಾರ್ಯಾಚರಣೆ ನಡೆಸಲಾಯಿತು. ಪಿಸಿ ಆರ್.ಕೆ. ಭರದ್ವಾಜ್ ಅವರ ಮಾರ್ಗದರ್ಶನದಲ್ಲಿ, ಎಎಸ್‌ಐ ಎನ್.ಜಿ. ನಾಯಕ್ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ಕಾರ್ಯಾಚರಣೆಯ ವೇಳೆ ಬ್ಯಾಡಗಿ-ಹಾವೇರಿ ರೈಲು ಮಾರ್ಗದ ಕಿಮೀ 381/500 ಸಮೀಪ ಸಿಸಿಟಿವಿಯಲ್ಲಿ ಕಂಡುಬಂದ ವ್ಯಕ್ತಿಗಳ ಲಕ್ಷಣಗಳಿಗೆ ಹೊಂದುವ ಮೂವರು ಬಾಲಕರನ್ನು ಗುರುತಿಸಲಾಯಿತು. ಸ್ಥಳದಲ್ಲೇ ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಅವರು ಮೇ 28ರಂದು ರೈಲು ಸಂಖ್ಯೆ 20675 ಹಾಗೂ 26752 ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಂತರ ಬಾಲಕರನ್ನು ಹೆಚ್ಚಿನ ವಿಚಾರಣೆಗಾಗಿ ಹರಿಹರ ಆರ್‌ಪಿಎಫ್ ಔಟ್‌ಪೋಸ್ಟ್‌ಗೆ ಕರೆತಂದು, ಬಳಿಕ ಕಾನೂನು ಪ್ರಕ್ರಿಯೆಗಳಿಗಾಗಿ ದಾವಣಗೆರೆ ಆರ್‌ಪಿಎಫ್ ಪೋಸ್ಟ್‌ಗೆ ಒಪ್ಪಿಸಲಾಯಿತು.
ಬಿಎನ್‌ಎಸ್‌ಎಸ್ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ, ಅಗತ್ಯವಿದ್ದಾಗ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ.ಪ್ರಕರಣದ ಕುರಿತು ತನಿಖಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ರೈಲುಗಳ ಮೇಲೆ ಕಲ್ಲು ತೂರಾಟದಂತಹ ಕೃತ್ಯಗಳು ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುತ್ತವೆ ಎಂದು ರೈಲ್ವೆ ರಕ್ಷಣಾ ಪಡೆ ಎಚ್ಚರಿಸಿದೆ. ಮಕ್ಕಳಿಗೆ ಇಂತಹ ಕೃತ್ಯಗಳ ಕಾನೂನು ಪರಿಣಾಮಗಳ ಬಗ್ಗೆ ಪೋಷಕರು ಹಾಗೂ ಪಾಲಕರು ಜಾಗೃತಿ ಮೂಡಿಸಬೇಕು ಎಂದು ಆರ್‌ಪಿಎಫ್ ಮನವಿ ಮಾಡಿದೆ.









