ಬೆಂಗಳೂರು.ಸೆಪ್ಟೆಂಬರ್.13: ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪರಿಶೀಲನೆ ವೇಳೆ ತಡೆಹಿಡಿಯಲಾದ ಪಿಂಚಣಿ ಕುರಿತ ಸಮಸ್ಯೆ ಹಾಗೂ ಕುಂದು-ಕೊರತೆಗಳನ್ನು ಆಲಿಸಲು ಕಂದಾಯ ಇಲಾಖೆಯು ಟೋಲ್‌ಫ್ರೀ ದೂರವಾಣಿ ಸಂಖ್ಯೆಯನ್ನು ಒದಗಿಸಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಹಾಗೂ ಪ್ರಸ್ತುತ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಲ್ಲಿ ಸಂದೇಹಾಸ್ಪದವೆಂದು ಗುರುತಿಸಲಾದವರನ್ನು ‘ಸಂಯೋಜನೆ’ ಮೊಬೈಲ್ ಆಪ್ ಮೂಲಕ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಉಸ್ತುವಾರಿಯಲ್ಲಿ ಪರಿಶೀಲಿಸಲಾಗುತ್ತಿದೆ. ಈ ಪರಿಶೀಲನಾ ಕಾರ್ಯವು ಮುಕ್ತಾಯದ ಹಂತದಲ್ಲಿದೆ.
ಪರಿಶೀಲನೆ ವೇಳೆ ಪಿಂಚಣಿ ಸ್ಥಗಿತಗೊಂಡಿರುವ ಕುರಿತು ಫಲಾನುಭವಿಗಳು ತಮ್ಮ ಅಹವಾಲು ಸಲ್ಲಿಸಲು ಬಿ.ಎಸ್.ಎನ್.ಎಲ್ (BSNL) ವತಿಯಿಂದ 1800-425-1247 ಟೋಲ್‌ಫ್ರೀ ಸಂಖ್ಯೆಯನ್ನು ನೀಡಲಾಗಿದೆ. ಫಲಾನುಭವಿಗಳು ಈ ಸಂಖ್ಯೆಗೆ ಕರೆ ಮಾಡಿದಾಗ, ಆಯುಕ್ತಾಲಯದಿಂದ ಕರೆಯನ್ನು ಸಂಬಂಧಪಟ್ಟ ತಾಲೂಕು ಕಚೇರಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿನ ಅಧಿಕಾರಿಗಳು ಫಲಾನುಭವಿಯ ಪಿಂಚಣಿ ಸಮಸ್ಯೆಗಳನ್ನು ಆಲಿಸಿ ಅಗತ್ಯ ಪರಿಹಾರ ಮತ್ತು ಮಾಹಿತಿ ನೀಡಲಿದ್ದಾರೆ.


ಈ ಟೋಲ್‌ಫ್ರೀ ಸಂಖ್ಯೆಯ ಸೌಲಭ್ಯದ ಬಗ್ಗೆ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಮತ್ತು ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ತಲುಪಿಸಲು ಅಗತ್ಯ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.















