ಬೆಂಗಳೂರು.ಸೆಪ್ಟೆಂಬರ್.13: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿರುವ ’80ರ ದಶಕದ ಫೋಟೋ ಎಡಿಟಿಂಗ್’ ಟ್ರೆಂಡ್ ಕುರಿತು ಮಾದನಾಯಕನಹಳ್ಳಿ ಪೊಲೀಸರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಆಕರ್ಷಕ ಫೋಟೋಗಳ ನೆಪದಲ್ಲಿ ಸೈಬರ್ ವಂಚಕರು ನಿಮ್ಮ ಮೊಬೈಲ್ ಡೇಟಾ ಹಾಗೂ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಅಪಾಯವಿದ್ದು, ಎಚ್ಚರದಿಂದಿರುವಂತೆ ಜಾಗೃತಿ ಪ್ರಕಟಣೆ ಹೊರಡಿಸಿದ್ದಾರೆ.
ತಮ್ಮ ಇತ್ತೀಚಿನ ಫೋಟೋಗಳನ್ನು ವಿಂಟೇಜ್ ಶೈಲಿಗೆ ಬದಲಾಯಿಸಿಕೊಳ್ಳುವ ಆಸೆಯಲ್ಲಿ ಜನರು ಅಪರಿಚಿತ ಥರ್ಡ್-ಪಾರ್ಟಿ ಆ್ಯಪ್‌ಗಳು ಹಾಗೂ ಆನ್‌ಲೈನ್ ಲಿಂಕ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸಾರ್ವಜನಿಕರ ಈ ಕ್ರೇಜ್ ಅನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕ್ರಿಮಿನಲ್‌ಗಳು, ನಕಲಿ ಆ್ಯಪ್ ಮತ್ತು ಮಾಲ್‌ವೇರ್ ಲಿಂಕ್‌ಗಳ ಮೂಲಕ ಮೊಬೈಲ್ ಅಥವಾ ಕಂಪ್ಯೂಟರ್‌ಗಳ ಪ್ರವೇಶ ಪಡೆದು ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಪೊಲೀಸರ ಪ್ರಮುಖ ಸೂಚನೆಗಳು
ಅಪರಿಚಿತ ಲಿಂಕ್ ಮುಟ್ಟಬೇಡಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ಅನಧಿಕೃತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಿ.
ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ: ಫೋಟೋ ಎಡಿಟಿಂಗ್ ನೆಪದಲ್ಲಿ ಯಾವುದೇ ಆ್ಯಪ್‌ಗಳು ಪಾಸ್‌ವರ್ಡ್, ಬ್ಯಾಂಕ್ ಖಾತೆ ಅಥವಾ ಇತರೆ ಸೂಕ್ಷ್ಮ ದಾಖಲೆಗಳನ್ನು ಕೇಳಿದರೆ ಅಪ್ಪಿತಪ್ಪಿಯೂ ಮಾಹಿತಿ ನೀಡಬೇಡಿ.
ವಿಶ್ವಾಸಾರ್ಹತೆ ಮುಖ್ಯ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಯಾವುದೇ ಹೊಸ ಟ್ರೆಂಡ್‌ಗಳನ್ನು ಕುರುಡಾಗಿ ಅನುಸರಿಸದೆ, ಬಳಸುವ ಪ್ಲಾಟ್‌ಫಾರ್ಮ್‌ನ ಸುರಕ್ಷತೆಯನ್ನು ಮೊದಲು ಖಚಿತಪಡಿಸಿಕೊಳ್ಳಿ.
ಡಿಜಿಟಲ್ ಜಗತ್ತಿನಲ್ಲಿ ಒಂದು ಸಣ್ಣ ಅಜಾಗರೂಕತೆಯೂ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಸಾರ್ವಜನಿಕರು ಸದಾ ಎಚ್ಚರಿಕೆಯಿಂದಿದ್ದು, ತಮ್ಮ ಸೈಬರ್ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.












