ಸುದ್ದಿಒನ್ : ಭಾರತ ಮತ್ತು ಚೀನಾ ಗಡಿ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವತ್ತ ಹೆಜ್ಜೆ ಇಟ್ಟಿವೆ. ಎಲ್‌ಎಸಿ ಬಳಿ ಗಸ್ತು ತಿರುಗುವ ಕುರಿತು ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬರಲಾಯಿತು. ಈ ನಿಟ್ಟಿನಲ್ಲಿ ಪೂರ್ವ ಲಡಾಖ್‌ನಲ್ಲಿ ಈಗ ಪಡೆಗಳ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ದೀಪಾವಳಿಯ ಸಂದರ್ಭದಲ್ಲಿ ಬುಧವಾರ (ಅಕ್ಟೋಬರ್ 30) ಎರಡೂ ಸೇನೆಗಳು ಪರಸ್ಪರ ಸಿಹಿ ಹಂಚಿಕೊಡು ಸಂಭ್ರಮಿಸಿವೆ. ಸೇನೆಯಿಂದ ಪಡೆದ ಮಾಹಿತಿಯ ಪ್ರಕಾರ, ಭಾರತ ಮತ್ತು ಚೀನಾ ನಡುವಿನ ಮಹತ್ವದ ಒಪ್ಪಂದದ ನಂತರ ಈ ಬೆಳವಣಿಗೆ ನಡೆದಿದೆ.
ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶದಲ್ಲಿ ಚೀನಾ ಮತ್ತು ಭಾರತದ ನಡುವಿನ ಎರಡು ಸಂಘರ್ಷದ ಸ್ಥಳಗಳಲ್ಲಿ ಸೈನ್ಯವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಸೇನೆಯು ಈ ಸ್ಥಳಗಳಲ್ಲಿ ಗಸ್ತು ತಿರುಗಲು ಪ್ರಾರಂಭಿಸುತ್ತದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ಸಂಭ್ರಮದಲ್ಲಿ ಗುರುವಾರ ಉಭಯ ದೇಶಗಳ ಸೈನಿಕರು ಸಿಹಿ ಹಂಚಿಕೊಂಡರು ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಸೇನೆ ಹಿಂಪಡೆದ ಬಳಿಕ ಇದೀಗ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಭಯ ಸೇನೆಗಳ ಗ್ರೌಂಡ್ ಕಮಾಂಡರ್‌ಗಳ ನಡುವಿನ ಗಸ್ತು ವ್ಯವಸ್ಥೆ ಇನ್ನೂ ನಿರ್ಧಾರವಾಗಿಲ್ಲ. ಸಂಧಾನ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಮಾತುಕತೆಗಳು ಪ್ರಾರಂಭವಾಗುತ್ತವೆ. ಇದೀಗ ಈ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ಒಪ್ಪಂದದ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಮೊದಲಿಗೆ, ಎರಡೂ ಕಡೆಯವರು ರಾಜತಾಂತ್ರಿಕ ಮಟ್ಟದಲ್ಲಿ ಸಹಿ ಹಂಚಿಕೊಂಡಿದ್ದಾರೆ. ನಂತರ ಚೀನಾ ಮತ್ತು ಭಾರತೀಯ ಮಿಲಿಟರಿ ಅಧಿಕಾರಿಗಳ ನಡುವೆ ಮಿಲಿಟರಿ ಮಟ್ಟದ ಮಾತುಕತೆ ಪ್ರಾರಂಭವಾಯಿತು. ಕಳೆದ ವಾರ ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಒಪ್ಪಂದದ ವಿವರಗಳನ್ನು ಅಂತಿಮಗೊಳಿಸಲಾಯಿತು.
ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬಂದ ನಂತರ ಎರಡೂ ಕಡೆಯವರು ವಾಪಸಾತಿ ಪ್ರಕ್ರಿಯೆ ಆರಂಭಿಸಿದರು. ಪೂರ್ವ ಲಡಾಖ್‌ನಲ್ಲಿರುವ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಒಪ್ಪಂದದ ನಂತರ ಪ್ರಕ್ರಿಯೆಯು ಪ್ರಾರಂಭವಾಯಿತು. ಎರಡು ದೇಶಗಳ ನಡುವೆ ಗಸ್ತು ತಿರುಗುವಿಕೆ ಮತ್ತು ಪಡೆಗಳನ್ನು ಹಿಂತೆಗೆದುಕೊಳ್ಳುವ ಕುರಿತು ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಕಳೆದ ನಾಲ್ಕು ವರ್ಷಗಳಿಂದ ಉಭಯ ದೇಶಗಳ ನಡುವೆ ಬಿಕ್ಕಟ್ಟು ಇತ್ತು. ಈ ಒಪ್ಪಂದದ ನಂತರ, ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ದೊಡ್ಡ ಯಶಸ್ಸು ಕಂಡುಬಂದಿದೆ.
ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟಿತ್ತು. ಗಾಲ್ವಾನ್‌ನಲ್ಲಿ ಎರಡು ಕಡೆಯ ನಡುವಿನ ಮಿಲಿಟರಿ ಘರ್ಷಣೆಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ತೀವ್ರವಾಗಿದ್ದವು. ಸೇನೆಯ ಅಧಿಕಾರಿಯೊಬ್ಬರ ಪ್ರಕಾರ, ಉಭಯ ದೇಶಗಳ ಸೇನೆಗಳ ನಡುವಿನ ಪ್ರದೇಶಗಳಲ್ಲಿ ಪರಿಸ್ಥಿತಿ ಮತ್ತು ಗಸ್ತು ತಿರುಗುವಿಕೆಯು ಏಪ್ರಿಲ್ 2025 ರ ವೇಳೆಗೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ.