ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಆರಂಭಿಸಿರುವ ವಾಟ್ಸಾಪ್ ಸೇವೆಗೆ ದೇಶಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಈ ಸೇವೆ ಜಾರಿಯಾದ ಕೇವಲ 14 ದಿನಗಳಲ್ಲಿ 1 ಕೋಟಿಗೂ ಹೆಚ್ಚು ಬಳಕೆದಾರರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು EPFO ನವೆಂಬರ್ 18ರಂದು ತನ್ನ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಇಪಿಎಫ್ಒ ಕಚೇರಿಗೆ ಅಲೆಯುವ ಅಥವಾ ವೆಬ್ಸೈಟ್ಗೆ ಲಾಗಿನ್ ಆಗುವ ಕಿರಿಕಿರಿ ಇಲ್ಲದೆಯೇ, ಕೇವಲ ಒಂದು ವಾಟ್ಸಾಪ್ ಸಂದೇಶದ ಮೂಲಕ ಉದ್ಯೋಗಿಗಳು ತಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು, ಇತ್ತೀಚಿನ ವಹಿವಾಟುಗಳನ್ನು ನೋಡಬಹುದು ಮತ್ತು ಪಾಸ್ಬುಕ್ ಡೌನ್ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಸದಸ್ಯರು ಇಪಿಎಫ್ಒದ ಅಧಿಕೃತ ವಾಟ್ಸಾಪ್ ಸಂಖ್ಯೆ +91 8796441800 ಗೆ ‘Hi’ ಎಂದು ಸಂದೇಶ ಕಳುಹಿಸಿದರೆ ಸಾಕು.
ವಾಟ್ಸಾಪ್ನಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳು

ಪ್ರಸ್ತುತ ಇಪಿಎಫ್ಒ ವಾಟ್ಸಾಪ್ ಮೂಲಕ ಈ ಕೆಳಗಿನ ಪ್ರಮುಖ ಸೇವೆಗಳನ್ನು ಒದಗಿಸುತ್ತಿದೆ:
ಪಿಎಫ್ ಬ್ಯಾಲೆನ್ಸ್ ಪರಿಶೀಲನೆ: ಸದಸ್ಯರು ತಮ್ಮ ಮೆಂಬರ್ ಐಡಿಗೆ ಲಿಂಕ್ ಆಗಿರುವ ಒಟ್ಟು ಪಿಎಫ್ ಬ್ಯಾಲೆನ್ಸ್, ಉದ್ಯೋಗಿ ಹಾಗೂ ಉದ್ಯೋಗದಾತರ ವಂತಿಗೆ ಮತ್ತು ಪಿಂಚಣಿ ವಂತಿಗೆಯ ವಿವರಗಳನ್ನು ತಿಳಿಯಬಹುದು.
ಕೊನೆಯ 5 ವಹಿವಾಟುಗಳು: ಮಾಸಿಕ ವಂತಿಗೆ, ಬಡ್ಡಿ ಜಮೆ ಮತ್ತು ಹಣ ಹಿಂಪಡೆದ (Withdrawals) ವಿವರಗಳು ಸೇರಿದಂತೆ ಖಾತೆಯ ಇತ್ತೀಚಿನ 5 ವಹಿವಾಟುಗಳನ್ನು ವೀಕ್ಷಿಸಬಹುದು.
ಇಪಿಎಫ್ ಪಾಸ್ಬುಕ್ ಡೌನ್ಲೋಡ್: ಖಾತೆಗಳನ್ನು ವಿಲೀನಗೊಳಿಸದಿದ್ದಲ್ಲಿ (Clubbed ಆಗದಿದ್ದಲ್ಲಿ), ವಂತಿಗೆ ಮತ್ತು ಬಡ್ಡಿ ವಿವರಗಳನ್ನು ಒಳಗೊಂಡ ಪಾಸ್ವರ್ಡ್-ರಕ್ಷಿತ ಪಿಡಿಎಫ್ (PDF) ಪಾಸ್ಬುಕ್ ಪಡೆಯಬಹುದು.
PMVBRY ಸಹಾಯ: ಆಧಾರ್ ದೃಢೀಕರಣ ಅಥವಾ ದಾಖಲೆಗಳ ಕೊರತೆಯಿಂದಾಗಿ ‘ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್ಗಾರ್ ಯೋಜನೆ’ (PMVBRY) ಅಡಿಯಲ್ಲಿ ಬಾಕಿ ಉಳಿದಿರುವ ಸೌಲಭ್ಯಗಳು ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು ನೆರವು ಪಡೆಯಬಹುದು.
EPFO ವಾಟ್ಸಾಪ್ ಸೇವೆಯನ್ನು ಬಳಸುವುದು ಹೇಗೆ?

ಈ ಸೇವೆಯನ್ನು ಪಡೆಯಲು ನಿಮ್ಮ ಇಪಿಎಫ್ ಖಾತೆಗೆ ನೋಂದಾಯಿಸಲಾದ (Registered) ಮೊಬೈಲ್ ಸಂಖ್ಯೆಯಿಂದಲೇ ವಾಟ್ಸಾಪ್ ಬಳಸುವುದು ಕಡ್ಡಾಯವಾಗಿದೆ. ಏಕೆಂದರೆ ಒಟಿಪಿ (OTP) ದೃಢೀಕರಣಕ್ಕೆ ಇದೇ ಸಂಖ್ಯೆಯನ್ನು ಬಳಸಲಾಗುತ್ತದೆ.
ಮೊದಲು ಇಪಿಎಫ್ಒದ ಅಧಿಕೃತ ವಾಟ್ಸಾಪ್ ಸಂಖ್ಯೆ +91 8796441800 ಅನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಳ್ಳಿ.
ವಾಟ್ಸಾಪ್ ತೆರೆದು ಆ ಸಂಖ್ಯೆಗೆ ‘Hi’ ಎಂದು ಸಂದೇಶ ಕಳುಹಿಸಿ.
ಪರದೆಯ ಮೇಲೆ ಕಾಣಿಸುವ ಆಯ್ಕೆಗಳಲ್ಲಿ ನಿಮ್ಮ ಆದ್ಯತೆಯ ಭಾಷೆಯನ್ನು ಆರಿಸಿ.
ನಂತರ Check Balance, Last 5 Transactions, Download Passbook ಮತ್ತು Change Language ಎಂಬ ನಾಲ್ಕು ಆಯ್ಕೆಗಳ ಮೆನು ಕಾಣಿಸುತ್ತದೆ.
ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ.
ಆಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇಪಿಎಫ್ಒ ಕಡೆಯಿಂದ ಒಟಿಪಿ (OTP) ಬರುತ್ತದೆ. ವಾಟ್ಸಾಪ್ ಚಾಟ್ನಲ್ಲಿ ‘Enter OTP’ ಆಯ್ಕೆ ಮಾಡಿ ಆ ಕೋಡ್ ನಮೂದಿಸಿ.
ದೃಢೀಕರಣ ಪೂರ್ಣಗೊಂಡ ಬಳಿಕ ದೃಢೀಕರಣ ಸಂದೇಶ ಬರುತ್ತದೆ. ನಿಮ್ಮ UAN ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಮೆಂಬರ್ ಐಡಿಗಳಿದ್ದರೆ, ನಿಮಗೆ ಬೇಕಾದ ಖಾತೆಯನ್ನು ಆರಿಸಿಕೊಳ್ಳಿ.
ಬ್ಯಾಲೆನ್ಸ್, ಪಾಸ್ಬುಕ್ ಮತ್ತು ವಹಿವಾಟು ಪರಿಶೀಲಿಸುವ ವಿಧಾನ
ಪಿಎಫ್ ಬ್ಯಾಲೆನ್ಸ್ ತಿಳಿಯಲು: ಒಟಿಪಿ ದೃಢೀಕರಣದ ನಂತರ ಮುಖ್ಯ ಮೆನುವಿನಲ್ಲಿ ‘Check Balance’ ಆಯ್ಕೆ ಮಾಡಿ. ಒಂದಕ್ಕಿಂತ ಹೆಚ್ಚು ಖಾತೆಗಳಿದ್ದರೆ ಸೂಕ್ತ ಮೆಂಬರ್ ಐಡಿ ಆರಿಸಿ. ತಕ್ಷಣವೇ ಒಟ್ಟು ಪಿಎಫ್ ಬ್ಯಾಲೆನ್ಸ್, ಉದ್ಯೋಗಿ-ಉದ್ಯೋಗದಾತರ ವಂತಿಗೆ, ಪಿಂಚಣಿ ವಂತಿಗೆ ಹಾಗೂ ಕೊನೆಯ ಜಮೆ ದಿನಾಂಕದ ವಿವರ ಲಭ್ಯವಾಗುತ್ತದೆ.
ಪಾಸ್ಬುಕ್ ಡೌನ್ಲೋಡ್ ಮಾಡಲು: ಚಾಟ್ನಲ್ಲಿ ‘Download Passbook’ ಆಯ್ಕೆ ಮಾಡಿ, ಸೂಕ್ತ ಮೆಂಬರ್ ಐಡಿ ಆರಿಸಿ. ಇಪಿಎಫ್ಒ ಪಾಸ್ವರ್ಡ್-ರಕ್ಷಿತ ಪಿಡಿಎಫ್ ಫೈಲ್ ಕಳುಹಿಸುತ್ತದೆ. ಅದನ್ನು ಡೌನ್ಲೋಡ್ ಮಾಡಿ ತೆರೆಯಲು ನಿಮ್ಮ ಜನ್ಮ ದಿನಾಂಕವನ್ನು DDMMYY ಮಾದರಿಯಲ್ಲಿ ಪಾಸ್ವರ್ಡ್ ಆಗಿ ನಮೂದಿಸಬೇಕು.
ಕೊನೆಯ 5 ವಹಿವಾಟು ನೋಡಲು: ಮೆನುವಿನಲ್ಲಿ ‘Last 5 Transactions’ ಆಯ್ಕೆ ಮಾಡಿ (ಅಗತ್ಯವಿದ್ದರೆ ಮೆಂಬರ್ ಐಡಿ ಆರಿಸಿ). ದಿನಾಂಕದ ಸಮೇತ ನಿಮ್ಮ ಇತ್ತೀಚಿನ 5 ವಹಿವಾಟುಗಳ ವಿವರ ಪರದೆಯ ಮೇಲೆ ಕಾಣಿಸುತ್ತದೆ.

ಗಮನಿಸಬೇಕಾದ ಪ್ರಮುಖ ಅಂಶಗಳು
ಸದಸ್ಯರು ಕೇವಲ ಅಧಿಕೃತ ವಾಟ್ಸಾಪ್ ಸಂಖ್ಯೆ +91 8796441800 ಅನ್ನು ಮಾತ್ರ ಬಳಸಬೇಕು.
ವಾಟ್ಸಾಪ್ ಸಂಖ್ಯೆಯು ಇಪಿಎಫ್ಒ ಖಾತೆಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಯೇ ಆಗಿರಬೇಕು.
ಸ್ವತಃ ಸಂದೇಶಗಳನ್ನು ಟೈಪ್ ಮಾಡುವ ಬದಲು ಚಾಟ್ನಲ್ಲಿ ಕಾಣಿಸುವ ಮೆನು ಆಯ್ಕೆಗಳನ್ನೇ ಬಳಸುವುದು ಸೂಕ್ತ. ಕೆಲವೊಮ್ಮೆ ಪ್ರತಿಕ್ರಿಯೆ ಬರಲು ಕೆಲವು ನಿಮಿಷಗಳ ಕಾಲಾವಕಾಶ ಬೇಕಾಗಬಹುದು.















