Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ದೇಶದ ಐಕ್ಯತೆಗಾಗಿ ಪ್ರಾಣ ಬಲಿಕೊಟ್ಟ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ: ಎಂ.ಕೆ. ತಾಜ್‌ಪೀರ್

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 19 : ಅನೇಕ ದಿಟ್ಟ ತೀರ್ಮಾನಗಳನ್ನು ಕೈಗೊಂಡ ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ದೇಶದ ಐಕ್ಯತೆಗಾಗಿ ಪ್ರಾಣವನ್ನೇ ಬಲಿಕೊಟ್ಟ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆಯೆ ವಿನಃ ಬೇರೆ ಯಾವ ಪಕ್ಷಕ್ಕೂ ಅಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಚರಿಸಲಾದ ಇಂದಿರಾಗಾಂಧಿರವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಇಂದಿರಾಗಾಂಧಿ ಸ್ವತಂತ್ರ ಭಾರತದ ನಾಲ್ಕನೆ ಪ್ರಥಮ ಮಹಿಳಾ ಪ್ರಧಾನಿಯಾಗಿದ್ದಕ್ಕೆ ಎಲ್ಲರೂ ಹೆಮ್ಮೆ ಪಡಬೇಕು. ಗಾಂಧಿ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಇಂದಿರಾಗಾಂಧಿ ತಂದೆ ಜವಾಹರಲಾಲ್‍ರವರ ಮಾರ್ಗದರ್ಶನದಂತೆ ಮುನ್ನಡೆದರು. ಕೇವಲ ಸಿರಿವಂತರಿಗಷ್ಟೆ ಮೀಸಲಾಗಿದ್ದ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿ
ಉಳುವವನೆ ಭೂಮಿಯ ಒಡೆಯ ಎನ್ನುವ ಕಾಯಿದೆ ಜಾರಿಗೆ ತಂದ ಪರಿಣಾಮ ಬಡವನು ಭೂಮಿಯ ಮಾಲಿಕನಾಗಲು ಸಾಧ್ಯವಾಯಿತು. ಕರ್ನಾಟಕದಲ್ಲಿ ಈ ಕಾಯಿದೆಯನ್ನು ಅನುಷ್ಠಾನಕ್ಕೆ ತಂದವರು ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸುರವರು ಎಂದು ಸ್ಮರಿಸಿದರು.

ಜನಾರ್ಧನ ಪೂಜಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾಲ ಮೇಳ ಆಯೋಜಿಸಿ ಬಡವರ ಕಷ್ಟಕ್ಕೆ ನೆರವಾದರು. ದೇಶದ ಐಕ್ಯತೆಗಾಗಿ ಇಂದಿರಾಗಾಂಧಿ 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದರು. ದೇಶವನ್ನು ವಿಭಜನೆ ಮಾಡಲು ಹೊರಟಾಗ ಅವರು ಬ್ಲೂಸ್ಟಾರ್ ಆಪರೇಷನ್ ಮೂಲಕ ಉಗ್ರರನ್ನು ಸದೆಪಡಿದ ಪರಿಣಾಮ ಅಂಗರಕ್ಷಕರಿಂದಲೇ ಹತ್ಯೆಯಾಗಬೇಕಾಯಿತು ಎಂದು ಕಂಬನಿ ಮಿಡಿದರು.

ದೇಶದ ಅಭಿವೃದ್ದಿಯಲ್ಲಿ ಕರ್ನಾಟಕ ಮತ್ತು ಚಿತ್ರದುರ್ಗ ಜಿಲ್ಲೆಯ ಪಾತ್ರ ದೊಡ್ಡದು ಎಂದು ಎಂ.ಕೆ.ತಾಜ್‍ಪೀರ್ ತಿಳಿಸಿದರು. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಚಿಕ್ಕಂದಿನಿಂದಲೂ ಅನೇಕ ಸವಾಲುಗಳನ್ನು ಎದುರಿಸಿ ದೇಶದ ಪ್ರಧಾನಿಯಾಗಿದ್ದ
ಇಂದಿರಾಗಾಂಧಿ ಐರನ್ ಲೇಡಿ ಎಂಬ ಹೆಸರು ಗಳಿಸಿದ್ದರು. ಸಿಕ್ಕಿಂ ಮೇಲೆ ಚೀನಾ ದಾಳಿ ನಡೆಸಿದಾಗ ವೈರಿಗಳನ್ನು ಹಿಮ್ಮೆಟಿಸಿದರು. ಹಾಗಾಗಿ ಇಂದಿರಾರವರನ್ನು ವಿಶ್ವವೇ ಕೊಂಡಾಡಿತು. ವಾಜಪೇಯಿ ಇಂದಿರಾಗಾಂಧಿಯನ್ನು ದುರ್ಗಿ ಎಂದು ಕರೆಯುತ್ತಿದ್ದರು. ಅಷ್ಟೊಂದು ಶಕ್ತಿಶಾಲಿ ಪ್ರಧಾನಿಯಾಗಿದ್ದರೆಂದು ಗುಣಗಾನ ಮಾಡಿದರು.

ಯೂತ್ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಎನ್.ಶಶಾಂಕ್ ಮಾತನಾಡುತ್ತ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ನಾಯಕರುಗಳ ಜಯಂತಿ ಹಾಗೂ ಪುಣ್ಯಸ್ಮರಣೆಯನ್ನು ಆಚರಿಸಿದಾಗ ಮಾತ್ರ ಅವರುಗಳ ಇತಿಹಾಸ ಏನು ಎನ್ನುವುದು ಗೊತ್ತಾಗುತ್ತದೆ. ತಮ್ಮ ಜೀವಿತಾವಧಿಯ ಕೊನೆ ಗಳಿಗೆಯನ್ನು ದೇಶಕ್ಕಾಗಿ ಅರ್ಪಿಸಿಕೊಂಡ ಇಂದಿರಾಗಾಂಧಿರವರ ಹೆಸರು ಈಗಲೂ ದೇಶದೆಲ್ಲೆಡೆ ಹರಿದಾಡುತ್ತಿದೆ ಎಂದರು.

ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ ಇಂದಿರಾಗಾಂಧಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡವರ ಪರ ಕಾಳಜಿ ಹೊಂದಿದ್ದರು. ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿ ಸುಲಭವಾಗಿ ಬಡವನು ಬ್ಯಾಂಕ್‍ನಲ್ಲಿ ವ್ಯವಹರಿಸುವಂತೆ ಮಾಡಿದರು. ಉಳುವವನೆ ಭೂಮಿಯ ಒಡೆಯ ಎನ್ನುವ ಕಾಯಿದೆ ಜಾರಿಗೆ ತಂದರು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಣುಕಾ ಶಿವು ಮಾತನಾಡುತ್ತ ಇಂದಿರಾ ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ ಗೌರವ. ಪ್ರತಿ ಮನೆಯಲ್ಲಿಯೂ ಹೆಣ್ಣು ಮಕ್ಕಳನ್ನು ಇಂದಿರಾಗಾಂಧಿಯವರಂತೆ ದಿಟ್ಟ ಮಹಿಳೆಯನ್ನಾಗಿ ಬೆಳೆಸುವುದು ಪೋಷಕರುಗಳ ಹೊಣೆ. ಎಲ್ಲಾ ರಂಗದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಯಾವುದೆ ಕೀಳರಿಮೆ ಬೇಡ. ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಮನವಿ ಮಾಡಿದರು.

ಪ್ರಕಾಶ್‍ರಾಮನಾಯ್ಕ ಮಾತನಾಡಿ 1966 ರಲ್ಲಿ ದೇಶದ ಪ್ರಧಾನಿಯಾದ ಇಂದಿರಾಗಾಂಧಿ ಸಾಕಷ್ಟು ಸಮಸ್ಯೆ ಸವಾಲುಗಳನ್ನು ದಿಟ್ಟತನದಿನದಿಂದ ನಿಭಾಯಿಸಿದರು.
ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿದ್ದರಿಂದ ಬಡವನು ಬ್ಯಾಂಕ್‍ಗಳಲ್ಲಿ ವ್ಯವಹರಿಸುವಂತಾಗಿದೆ. ಗರೀಭಿ ಹಠಾವೋ ಯೋಜನೆ ಜಾರಿಗೆ ತಂದು ಬಡತನ ನಿರ್ಮೂಲನೆಗೆ ಒತ್ತು ಕೊಟ್ಟರು. 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು ದೇಶದ ಹಿತ ಕಾಪಾಡಬೇಕಾಯಿತು. ಈಗ ಆರ್.ಎಸ್.ಎಸ್. ಬಿಜೆಪಿ.ಯವರು ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಅಪ ಪ್ರಚಾರ ನಡೆಸುತ್ತಿರುವುದರ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಉಪಾಧ್ಯಕ್ಷರುಗಳಾದ ನಜ್ಮತಾಜ್, ಎಸ್.ಎನ್.ರವಿಕುಮಾರ್, ಕೆ.ಪಿ.ಸಿ.ಸಿ. ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಪವಿತ್ರ, ಮುದಸಿರ್ ನವಾಜ್, ಡಾ.ರಹಮತ್‍ವುಲ್ಲಾ, ಸೈಯದ್ ಅಬ್ದುಲ್ಲಾ
ಚಾಂದ್‍ಪೀರ್, ಸ್ವಾಮಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಶಬ್ಬೀರ್‍ಭಾಷಾ, ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಡಿ.ಎಸ್.ಸುದರ್ಶನ್
ರವೀಂದ್ರ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಅನಂತ, ನ್ಯಾಯವಾದಿ ಮಹಮದ್ ರಫಿ ಇನ್ನು ಅನೇಕರು ಇಂದಿರಾಗಾಂಧಿ ಜಯಂತಿಯಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ