Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾಯಾವಿ ಚಿತ್ರಕ್ಕೆ ಶ್ರೀ ಶಾಂತವೀರ ಸ್ವಾಮೀಜಿ ಕ್ಲಾಪ್‌ : ದುರ್ಗದ ಯುವ ಪ್ರತಿಭೆ ರಘುರಾಮ್‌ ಬೆಳ್ಳಿ ತೆರೆಗೆ ಎಂಟ್ರಿ

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 17 : ಕಲ್ಲಿನ ಕೋಟೆ ಚಿತ್ರದುರ್ಗದ ಯುವ ಪ್ರತಿಭೆ ರಘು ರಾಮ್‌ ನಾಯಕರಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ʼಮಾಯಾವಿʼ ಗೆ ಶುಕ್ರವಾರ ಮುಹೂರ್ತ ನಡೆಯಿತು.

ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯ ಕಣಿವೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಚಿತ್ರ ತಂಡವು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು, ಚಿತ್ರೀಕರಣಕ್ಕೆ ಅಡಿ ಇಟ್ಟಿತು. ಕುಂಚಿಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಅವರು ಕ್ಲಾಪ್‌ ಮಾಡುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಭೋವಿ ಮಹಾ ಸಂಸ್ಥಾನದ ಆಡಳಿತಾಧಿಕಾರಿ ಗೋವಿಂದಪ್ಪ ಸೇರಿದಂತೆ ಹಲವರು ಇದ್ದರು.

ಇದೇ ವೇಳೆ ಚಿತ್ರ ತಂಡಕ್ಕೆ ಶುಭಾಶಯ ಕೋರಿದ ಶ್ರೀಗಳು, ಹೊಸ ಪ್ರಯತ್ನ, ಹೊಸ ಕಲಾವಿದರು, ಹೊಸ ಚಿಂತನೆಗಳೊಂದಿಗೆ ಹೊಸತನ್ನು ಮಾಡುವ ಹಂಬಲದೊಂದಿಗೆ ಈ ತಂಡ ತನ್ನ ಅನುಭವಗಳನ್ನು ಸಿನಿಮಾ ಮೂಲಕ ಹೇಳುವುದಕ್ಕಾಗಿ ಬಂದಿದೆ. ವಿಶೇಷವಾಗಿ ಮಠದ ಭಕ್ತರು, ಜಿಲ್ಲೆಯವರೇ ಆದ ಯುವ ಪ್ರತಿಭೆ ರಘುರಾಮ್‌ ಅವರು ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವುದು ತುಂಬಾ ಸಂತಸ ತಂದಿದೆ. ಒಂದೊಳ್ಳೆಯ ಪ್ರಯತ್ನದೊಂದಿಗೆ ತಮ್ಮ ಅನುಭವಗಳನ್ನು ಹೇಳಿಕೊಳ್ಳುವ ಹಂಬಲದಲ್ಲಿರುವ ಈ ತಂಡಕ್ಕೆ ಜನರ ಸಹಕಾರವೂ ಬೇಕಿದೆ ಎಂದು ಹೇಳಿದರು.

ಸಿನಿಮಾ ಮಾತ್ರವಲ್ಲ ಧಾರ್ಮಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲೂ ಹೊಸಬರು ಬರಬೇಕು, ಹೊಸ ಆಲೋಚನೆಗಳು ಹುಟ್ಟಿಕೊಳ್ಳಬೇಕು. ಯಾವುದು ಕೂಡ ನಿಂತ ನೀರಾಗಬಾರದು. ಎಲ್ಲದಕ್ಕೂ ಚಲನಶೀಲತೆ ಬರಬೇಕಾದರೆ ಹೊಸ ಪ್ರಯತ್ನಗಳು, ಹೊಸ ಆಲೋಚನೆಗಳು, ಹೊಸ ಅನುಭಗಳು ಮೇಳೈಸಿಕೊಳ್ಳಬೇಕು, ಆಗ ಮಾತ್ರ ಎಲ್ಲಾ ರಂಗಕ್ಕೂ ಒಂದು ಚಲನಶೀಲತೆ ಬರುತ್ತದೆ. ಆ ನಿಟ್ಟಿನಲ್ಲಿ ಇವತ್ತು ಸಿನಿಮಾ ರಂಗ ಯುವ ಪ್ರತಿಭೆಗಳ ಮೂಲಕ ಪ್ರಜ್ವಲಿಸುತ್ತಿದೆ. ಆ ಸಾಲಿನಲ್ಲಿ ನಮ್ಮ ಜಿಲ್ಲೆಯವರೇ ಆದ ರಘುರಾಮ್‌ ಅವರಂತಹ ಯುವ ಪ್ರತಿಭೆ ಪ್ರಜ್ವಲಿಸಬೇಕು ಎಂದರು.

ಹೊಸಬರಿಗೆ ವೇದಿಕೆಗಳು ಅಗತ್ಯ. ಇವತ್ತು ಚಿತ್ರದುರ್ಗದವರೇ ಆದ ಗಿಲ್ಲಿ ಎನ್ನುವ ನಟ ಇವತ್ತು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ದೊಡ್ಡ ದೊಡ್ಡ ನಟರು ಆತನ ಕಲೆಯನ್ನು ಮೆಚ್ಚಿಕೊಂಡು ಮಾತನಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣವೇ ಸೂಕ್ತ ವೇದಿಕೆ ಸಿಕ್ಕಿದ್ದು. ಅಂತಹ ಸಾಕಷ್ಟು ಪ್ರತಿಭೆಗಳು ಎಲೆಮರೆಯ ಕಾಯಿಗಳಂತೆ ಗ್ರಾಮೀಣ ಭಾಗದಲ್ಲಿವೆ. ಅವೆಲ್ಲವಕ್ಕೂ ವೇದಿಕೆ ಸಿಗಬೇಕು. ಸಿನಿಮಾವೂ ಒಂದು ವೇದಿಕೆ. ಅಲ್ಲಿ ಒಳ್ಳೆಯ ನಟನಾಗಿ ಗುರುತಿಸಿಕೊಂಡರೆ ಜನಪ್ರಿಯತೆ ಜತೆಗೆ ದುಡಿಮೆಯೂ ಆಗುತ್ತದೆ. ಹಾಗಂತ ಅಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಸಿನಿಮಾ ಮಾಡಿಯೂ ಹಣ ಮಾಡುತ್ತೇನೆನ್ನುವುದು ಕೂಡ ಅಷ್ಟು ಸರಳ ಇಲ್ಲ, ಒಟಿಟಿ, ಪೈರಸಿ ಬಂದ ಮೇಲೆ ಸಿನಿಮಾ ನಿರ್ಮಾಣ ದೊಡ್ಡ ಸವಾಲಾಗಿ ಎರ್ಪಟ್ಟಿದೆ. ಅವೆಲವನ್ನು ಮೀರಿ ಈ ತಂಡ ಸಕ್ಸಸ್‌ ಕಾಣಲಿ ಎಂದು ಶ್ರೀಗಳು ಹಾರೈಸಿದರು.

ಮಹೇಶ್ವರಪ್ಪ ಚಕ್ರಸಾಲಿ ಮತ್ತು ಶ್ರೀಮತಿ ರೂಪ ನಿರ್ಮಾಣದ ಈ ಚಿತ್ರಕ್ಕೆ ಶಂಕರ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು ʼಉಗ್ರಾವತಾರʼ ಎನ್ನುವ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಮಾಯಾವಿ ಮೂಲಕ ಅವರು ಬಡ್ತಿ ಪಡೆದಿದ್ದಾರೆ. ಕಥೆ, ಚಿತ್ರಕಥೆ ಬರೆಯುವ ಮೂಲಕ ನಿರ್ದೇಶನದ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ಗುರುದತ್ತ ಮುಸೂರಿ ಛಾಯಾಗ್ರಹಣ ಮಾಡುತ್ತಿದ್ದು, ಅಗಸ್ತ್ಯ ಸಂತೋಷ್‌ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಇನ್ನು ರಘು ರಾಮ್‌ ನಾಯಕರಾಗಿರುವ ಈ ಚಿತ್ರಕ್ಕೆ ನಿಶ್ಚಿತ ಶೆಟ್ಟಿ ನಾಯಕಿ. ಅವರೊಂದಿಗೆ ಹಿರಿಯ ಕಲಾವಿದ ಎಂ.ಕೆ. ಮಠ, ಸುರೇಶ್‌ ಬಾಬು ಸೇರಿದಂತೆ ಅನುಭವಿ ಕಲಾವಿದರ ತಂಡವೇ ಇದೆ.

ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳ ಜತೆಗೆ ನವೀರಾದ ಪ್ರೇಮ ಕಥಾ ಹಂದರದ ಈ ಚಿತ್ರಕ್ಕೆ ಒಟ್ಟು ೫೦ ದಿನಗಳ ಕಾಲ ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಹೊಸ ಪ್ರಯತ್ನದಲ್ಲಿ ಹೊಸ ಆಲೋಚನೆಗಳ ಮೂಲಕ ಹೊಸದಾದ ಒಂದು ಒಳ್ಳೆಯ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸುವ ಮೂಲಕ ನಮ್ಮನ್ನು ನಾವು ಭಿನ್ನವಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿದ್ದೇವೆ. ಪ್ರಯತ್ನ ನಮ್ಮದು, ಫಲ ಆ ದೇವರದು ಎಂದು ನಾಯಕ ನಟ ರಘುರಾಮ್ ಹೇಳಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...