ಸಾಕು ನಾಯಿ ಅಥವಾ ಬೆಕ್ಕಿನೊಂದಿಗೆ ದೂರದ ಪ್ರಯಾಣ ಮಾಡಲು ಬಯಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ವಿಶೇಷ ಸೌಲಭ್ಯವನ್ನು ಪರಿಚಯಿಸಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಇದೀಗ ‘ಪೆಟ್ ಬಾಕ್ಸ್’ ವ್ಯವಸ್ಥೆ ಲಭ್ಯವಿದ್ದು, ಪ್ರಯಾಣಿಕರು ತಮ್ಮ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ರೈಲಿನಲ್ಲಿ ಕರೆದೊಯ್ಯಬಹುದಾಗಿದೆ.
ರೈಲುಗಳಲ್ಲಿ ಸಾಕುಪ್ರಾಣಿಗಳ ಸುರಕ್ಷಿತ ಸಾಗಣೆಗೆ ಎಂಜಿನ್ ಸಮೀಪ ವಿಶೇಷ ಲೋಹದ ಪೆಟ್ಟಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ. ಈ ಪೆಟ್ಟಿಗೆಗಳಲ್ಲಿ ಪ್ರಾಣಿಗಳನ್ನು ಪ್ರಯಾಣದ ಅವಧಿಯಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ. ಆದರೆ, ಈ ಸೇವೆಯನ್ನು ಆನ್‌ಲೈನ್ ಮೂಲಕ ಬುಕ್ ಮಾಡಲು ಅವಕಾಶವಿಲ್ಲ.
ಪೆಟ್ ಬಾಕ್ಸ್ ಬುಕ್ಕಿಂಗ್ ಹೇಗೆ?
ಸಾಕುಪ್ರಾಣಿಗಳಿಗೆ ಪೆಟ್ ಬಾಕ್ಸ್ ಕಾಯ್ದಿರಿಸಲು ಪ್ರಯಾಣಿಕರು ತಮ್ಮ ಪ್ರಯಾಣ ಆರಂಭವಾಗುವ ರೈಲು ನಿಲ್ದಾಣದ ಪಾರ್ಸೆಲ್ ಅಥವಾ ಲಗೇಜ್ ವಿಭಾಗವನ್ನು ಸಂಪರ್ಕಿಸಬೇಕು. ಅಗತ್ಯ ದಾಖಲೆಗಳ ಪರಿಶೀಲನೆಯ ಬಳಿಕ ರೈಲ್ವೆ ಅಧಿಕಾರಿಗಳು ಬುಕ್ಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.
ರೈಲು ಹೊರಡುವ ಕನಿಷ್ಠ ಮೂರು ಗಂಟೆಗಳ ಮುಂಚಿತವಾಗಿಯೇ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೊನೆಯ ಕ್ಷಣದಲ್ಲಿ ಹೋದರೆ ಬುಕ್ಕಿಂಗ್ ಸಿಗದೇ ಇರುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅಗತ್ಯ ದಾಖಲೆಗಳು
ಕನ್ಫರ್ಮ್ ಟಿಕೆಟ್ ಕಡ್ಡಾಯ: RAC ಅಥವಾ ವೇಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವವರಿಗೆ ಈ ಸೌಲಭ್ಯ ಲಭ್ಯವಿರುವುದಿಲ್ಲ.
ವೆಟರ್ನರಿ ಫಿಟ್ನೆಸ್ ಪ್ರಮಾಣಪತ್ರ: ಪ್ರಯಾಣದ 24 ರಿಂದ 48 ಗಂಟೆಗಳೊಳಗೆ ಪಶುವೈದ್ಯರಿಂದ ನೀಡಲಾದ ಆರೋಗ್ಯ ಪ್ರಮಾಣಪತ್ರ.
ಲಸಿಕೆ ದಾಖಲೆ: ಸಾಕುಪ್ರಾಣಿಗೆ ನೀಡಿರುವ ಲಸಿಕೆಗಳ ವಿವರ ಹೊಂದಿರುವ ದಾಖಲೆ.
ಎಷ್ಟು ಶುಲ್ಕ?
ಪೆಟ್ ಬಾಕ್ಸ್ ಶುಲ್ಕವನ್ನು ಸಾಕುಪ್ರಾಣಿಯ ತೂಕದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಕೆಜಿಗೆ ಸುಮಾರು ₹30 ದರ ವಿಧಿಸಲಾಗುತ್ತದೆ. ಶುಲ್ಕ ಪಾವತಿಸಿದ ಬಳಿಕ ಲಗೇಜ್ ಟಿಕೆಟ್ ನೀಡಲಾಗುತ್ತಿದ್ದು, ಅದೇ ಬುಕ್ಕಿಂಗ್ ದೃಢೀಕರಣದ ದಾಖಲೆ ಆಗಿರುತ್ತದೆ.
ಪ್ರಯಾಣದ ವೇಳೆ ಎಲ್ಲಿ ಇರಿಸಲಾಗುತ್ತದೆ?
ಸಾಕುಪ್ರಾಣಿಗಳನ್ನು ಪ್ರಯಾಣಿಕರ ಕೋಚ್ ಅಥವಾ ಕ್ಯಾಬಿನ್ ಒಳಗೆ ಕರೆದೊಯ್ಯಲು ಅವಕಾಶ ಇರುವುದಿಲ್ಲ. ಅವುಗಳನ್ನು ರೈಲಿನ ಎರಡೂ ತುದಿಗಳಲ್ಲಿರುವ ವಿಶೇಷ ಪೆಟ್ ಬಾಕ್ಸ್‌ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ.ಈ ಹೊಸ ವ್ಯವಸ್ಥೆಯಿಂದ ಸಾಕುಪ್ರಾಣಿಗಳೊಂದಿಗೆ ದೂರದ ರೈಲು ಪ್ರಯಾಣ ಮಾಡುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












