ಬೆಂಗಳೂರು: ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಶಿವಮೊಗ್ಗ, ದಾವಣಗೆರೆ, ತಿಪಟೂರು ಭಾಗದಲ್ಲಿ ಅಡಿಕೆ ಬೆಳೆಗಾರರು ಹೆಚ್ಚಾಗಿದ್ದಾರೆ. ಅಡಿಕೆ ಬೆಳೆಯನ್ನೇ ನಂಬಿಕೊಂಡು ಸುಮಾರು ಜನ ಜೀವನ ಮಾಡ್ತಾ ಇದ್ದಾರೆ. ಅಡಿಕೆ ಮಾತ್ರವಲ್ಲ ಅದರ ಚಪ್ಪಟೆ ಕೂಡ ಉದ್ಯಮವೇ. ಅಡಿಕೆ ತಟ್ಟೆಗಳನ್ನ ಮಾಡುವ ಮೂಲಕ ಉದ್ಯಮವನ್ನ ಮಾಡ್ತಾರೆ. ಆದ್ರೆ ಈಗ ಆ ಉದ್ಯಮಕ್ಕೆ, ಆ ಕೃಷಿಗೇನೆ ವಿಶ್ವ ಆರೋಗ್ಯ ಸಂಸ್ಥೆ ಹೊಡೆತ ಕೊಡುತ್ತಿದೆ. ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಮತ್ತೆ ಹೇಳುತ್ತಿದೆ. ಅಷ್ಟೇ ಅಲ್ಲ ಅಡಿಕೆಯನ್ನ ನಿಷೇಧ ಮಾಡುವಂತೆ ಕರೆ ನೀಡಿದೆ.
ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಏಷ್ಯಾ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆ ಬಗ್ಗೆ ಕೆಲವು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಭಾರತ, ಬಾಂಗ್ಲಾ, ಭೂತಾನ್, ಉತ್ತರ ಕೊರಿಯಾ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಟಿಮೋರ್ ಲೆಸ್ಟೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಈ ಸಭೆಯಲ್ಲಿ ಅಡಿಕೆ ಬಗ್ಗೆ ಚರ್ಚೆಯನ್ನ ನಡೆಸಲಾಗಿದೆ. ಏಷ್ಯಾ ಒಕ್ಕೂಟದ ಎಲ್ಲಾ ರಾಷ್ಟ್ರಗಳಲ್ಲಿ ಒಟ್ಟಾಗಿ 28 ಕೋಟಿ ವಯಸ್ಕರರು ಮತ್ತು 1.1 ಕೋಟಿ ಅಪ್ರಾಪ್ತರು ಹೊಗೆರಹಿತ ತಂಬಾಕು, ನಿಕೋಟಿನ್ ವ್ಯವಸನಿಗಳಿದ್ದಾರೆ. ಇದು ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಗೆ ಕಾರಣವಾಗಿದೆ. ಇವುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಈ ಉತ್ಪನ್ನಗಳ ಸಾಲಿನಲ್ಲಿ ಅಡಿಕೆಯನ್ನೂ ಸೇರಿಸಿದೆ. ಅಡಿಕೆ ವಿಚಾರದಲ್ಲಿ WHO ಈ ಹೋರಾಟ ನಿನ್ನೆ ಮೊನ್ನೆಯದ್ದಲ್ಲ ಸುಮಾರು ಆರೇಳು ವರ್ಷದಿಂದಾನೂ ಈ ಬಗ್ಗೆ ಹೇಳುತ್ತಲೇ ಬಂದಿದೆ. ಆದ್ರೆ ಈ ರೀತಿಯ ಹೇಳಿಕೆ ಅಡಿಕೆ ಬೆಳೆಗಾರರ ಮೇಲೆ ಹೇಗೆಲ್ಲಾ ಪರಿಣಾಮ ಬೀಳಬಹುದು ಎಂಬ ಆತಂಕದಲ್ಲಿದ್ದಾರೆ ರೈತರು.
