ಶಕ್ತಿ ಯೋಜನೆ: ಕೆಎಸ್‍ಆರ್‍ಟಿಸಿಗೆ ರೂ.177.33 ಕೋಟಿ ಆದಾಯ : 4.36 ಕೋಟಿ ನಾರಿಯರು ಉಚಿತ ಪ್ರಯಾಣ

4 Min Read

ಚಿತ್ರದುರ್ಗ : ಮೇ.15: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಮುಂಬರುವ ಜೂನ್ 11 ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದ್ದು, ಈ ಯೋಜನೆಯಡಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 4.36 ಕೋಟಿ ನಾರಿಯರು ಉಚಿತ ಪ್ರಯಾಣ ಬೆಳೆಸಿರುವುದು ಗಮನಾರ್ಹ.

 

ಮಹಿಳಾ ಸಬಲೀಕರಣ ಉದ್ದೇಶದಿಂದ ಜಾರಿಗೊಳಿಸಿದ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗಕ್ಕೆ ಮಹಿಳೆಯರಿಗೆ ನೀಡಿರುವ ಶೂನ್ಯ ದರದ ಟಿಕೆಟ್ ನೀಡಿಕೆ ಮೂಲಕ ರೂ.177,33,69463 ಕೋಟಿ ಆದಾಯ ಲಭಿಸಿದೆ.

ದುಡಿಯುವ ಮಹಿಳೆಯರಿಗೆ ಶಕ್ತಿ:
ರಾಜ್ಯ ಸರ್ಕಾರದ ಪ್ರಮುಖ ಧ್ಯೇಯವು ದುಡಿಯುವ ಮಹಿಳೆಯರಿಗೆ ಬಡವರ್ಗದ ಮಹಿಳೆಯರಿಗೆ ಆತ್ಮಸ್ಥೆರ್ಯ ತುಂಬುವುದು ಆಗಿದೆ. ಗ್ಯಾರಂಟಿ ಯೋಜನೆಗಲ್ಲೊಂದಾದ ಶಕ್ತಿ ಯೋಜನೆಯು ದುಡಿಯುವ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬುತ್ತಿದೆ. ಗ್ರಾಮೀಣ  ಭಾಗದಲ್ಲಿ ಹೆಣ್ಣು ಕುಟುಂಬದ ಕಣ್ಣಾಗಿದ್ದು, ತನ್ನ ಕುಟುಂಬದ ಪೋಷಣೆಗಾಗಿ ಸಣ್ಣ ವ್ಯಾಪಾರ-ವಹಿವಾಟುಗಳಿಗೆ ನಗರಕ್ಕೆ ಮುಖಮಾಡಿ ಬರುವಾಗ ಅವಳ  ಪ್ರಯಾಣದ ಖರ್ಚು ತನ್ನ ಆದಾಯದ ಅರ್ಧದಷ್ಟಾಗುತ್ತದೆ. ತಮ್ಮ ವ್ಯಾಪಾರ-ವಹಿವಾಟು ನಡೆಸಲು ಅದರ ಭಾರವನ್ನು ಹೊರೆಯಾಗದಂತೆ ನಿರ್ವಹಿಸಲು ಶಕ್ತಿ ಯೋಜನೆ ಸಹಕಾರಿಯಾಗಿದೆ.

ಪ್ರತಿ ನಿತ್ಯ ಸರಾಸರಿ ರೂ.25.55 ಲಕ್ಷ ಆದಾಯ :
ಪ್ರತಿ ನಿತ್ಯ ಸರಾಸರಿ 62,837 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಪ್ರತಿ ನಿತ್ಯ ಸರಾಸರಿ ಶಕ್ತಿ ಯೋಜನೆಯಿಂದ ಚಿತ್ರದುರ್ಗ ವಿಭಾಗಕ್ಕೆ ರೂ.25,55,287 ಆದಾಯ ಬರುತ್ತಿದೆ.
ಚಿತ್ರದುರ್ಗ ವಿಭಾಗದ ವತಿಯಿಂದ ಶಕ್ತಿ ಯೋಜನೆ ಆರಂಭವಾದ 2023ರ ಜೂನ್ ಮಾಹೆಯಿಂದ 2025ರ ಮೇ 04 ರವರೆಗೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಒಟ್ಟು 4,36,09138 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗಕ್ಕೆ ಇಲ್ಲಿಯವರೆಗೆ ಒಟ್ಟು ರೂ.177,33,69463 ಕೋಟಿ ಆದಾಯ ಬಂದಿದೆ.
ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಾಗಲು ಶಕ್ತಿ ಯೋಜನೆ ಜಾರಿಯಾದ ನಂತರ ಹಣ  ಪಾವತಿಸುವ ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರಾಜ್ಯ ಸಾರಿಗೆ ನಿಗಮಗಳು ಸ್ವಾವಲಂಬಿಯಾಗುತ್ತಿವೆ. ಶಕ್ತಿ ಯೋಜನೆಯು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವುದರ ಜೊತೆಗೆ ಉದ್ಯೋಗಗಳ ಸೃಷ್ಠಿ ಮತ್ತು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಿದೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಸಾಮಾಜಿಕ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗೆ ಸಾಕ್ಷಿಯಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಿಂದ ನಗರ ಪಟ್ಟಣಗಳಿಗೆ ತೆರಳಿ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ. ಖಾಸಗಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಸಂಚಾರಿ ವೆಚ್ಚದಿಂದ ಮುಕ್ತರಾಗಿದ್ದಾರೆ.  ಮಹಿಳೆಯರು ಸಾಮಾನ್ಯವಾಗಿ ದುಡಿಯಲೆಂದೆ ತಮ್ಮ ತಿಂಗಳ ಆದಾಯದ ಶೇ.10ರಷ್ಟು ಹಣವವನ್ನು ಸಂಚಾರಕ್ಕಾಗಿ ವ್ಯಯಿಸಬೇಕಿತ್ತು. ಇನ್ನು ಶಾಲಾ-ಕಾಲೇಜು ವಿದ್ಯಾರ್ಥಿನಿಯರು ವಾರ್ಷಿಕ ಪಾಸ್ ಪಡೆಯಲು ನೀಡಬೇಕಿದ್ದ ಹಣದಲ್ಲಿಯೂ ಉಳಿತಾಯವಾಗಿದೆ. ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಸೇರಿದಂತೆ ಹಲವು ಚಟುವಟಿಕೆಗಳಿಗೆ ಶಕ್ತಿ ಯೋಜನೆಯಿಂದ ಶಕ್ತಿ ಲಭಿಸಿದೆ.

 

ಕೆಎಸ್‍ಆರ್‍ಟಿಸಿ ಬಸ್‍ಗಳ ಭರ್ತಿಯ ಜೊತೆಗೆ ನಾರಿಯರು ಆದಾಯ ಹೆಚ್ಚಿಸಿದ್ದಾರೆ. ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಿಗೂ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದ ಧಾರ್ಮಿಕ ಕೇಂದ್ರಗಳಲ್ಲೂ ದೇಣಿಗೆ ಸಂಗ್ರಹವೂ ಸಹ ದುಪ್ಪಟ್ಟಾಗಿದೆ.
ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ನೀಡುವ ಸಂಬಂಧ “ಶಕ್ತಿ ಯೋಜನೆ”ಯನ್ನು 2023ರ ಜೂನ್ 11 ರಿಂದ ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದಾಗಿನಿಂದಲೂ ಯಶಸ್ವಿಯಾಗಿ ನಡೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಚಿತ್ರದುರ್ಗ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಅವರು.

ಫಲಾನುಭವಿಗಳ ಅನಿಸಿಕೆ :
ಎ. ಅಂಜಲಿ ಕೋಂ ಅರುಣ್, ವಿ. ಪಾಳ್ಯ ಗ್ರಾಮ, ಚಿತ್ರದುರ್ಗ ತಾಲ್ಲೂಕು.
ಶಕ್ತಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದೇವೆ.  ಇಲ್ಲಯವರೆಗೂ ನಾವ ಕೆಲವು ಪುಣ್ಯ ಕ್ಷೇತ್ರಗಳ ದೇವಸ್ಥಾನಗಳ ದರ್ಶನವನ್ನೇ ಮಾಡಿರಲಿಲ್ಲ.  ಆಸೆ ಇದ್ದರೂ ದೂರದೂರದ ಊರುಗಳಿಗೆ ಬಸ್‍ನಲ್ಲಿ ಹೋಗಲು ಹೆಚ್ಚು ಹಣ ಖರ್ಚಾಗುತ್ತದೆ ಎಂದು ಹೋಗಲು ಆಗಿರಲಿಲ್ಲ.  ಸರ್ಕಾರದ ಗ್ಯಾರಂಟಿ ಯೋಜನೆಯಾಗಿರುವ ಶಕ್ತಿ ಯೋಜನೆಯಿಂದ ಮಕ್ಕಳು ಹಾಗೂ ನಮ್ಮ ಕುಟುಂಬದ ಎಲ್ಲರೂ ಹಲವಾರು ತೀರ್ಥಕ್ಷೇತ್ರಗಳ ದರ್ಶನದ ಭಾಗ್ಯವನ್ನು ಪಡೆದಿದ್ದೆವೆ. ಈ ಯೋಜನೆಯ ನಿರಂತರತೆಯನ್ನು ಸರ್ಕಾರ ಕಾಯ್ದುಕೊಂಡರೆ ನಮ್ಮಂತ ಹಲವಾರು ಮಹಿಳೆಯರಿಗೆ, ಮಕ್ಕಳಿಗೆ ಯೋಜನೆಯ ಮೂಲಕ ಅನುಕೂಲವಾಗಲಿದೆ.  ಇಂತಹ ಉತ್ತಮ ಯೋಜನೆಯನ್ನು ನಮಗಾಗಿ ನೀಡಿದ ಈ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ.

ದೇವೀರಮ್ಮ ಕೋಂ ಕೆಂಚಪ್ಪ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ನಮ್ಮದು ಮೂಲತಃ ಬಡ ಕುಟುಂಬವಾಗಿದ್ದು, ಅಂದಿನ ದಿವಸ ದುಡಿದ ಹಣದಿಂದ ಜೀವನ ಸಾಗಿಸುವುದೆ ದೊಡ್ಡ ಸಂಗತಿ, ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದಿಂದ ಜಾರಿಗೆ ಬಂದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಿಂದ ಧಾರ್ಮಿಕ ಪುಣ್ಯ ಕ್ಷೇತ್ರ ಸ್ಥಳಗಳಾದ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಸಿಗಂಧೂರು ಚೌಡೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿ, ನಾನು ಮತ್ತು ನನ್ನ ಕುಟುಂಬಕ್ಕೆ ದರ್ಶನದ ಭಾಗ್ಯ ದೊರೆತಂತಾಯಿತು. ಹೀಗೆ ಒಂದಲ್ಲಾ ಒಂದು ರೀತಿಯ ಕೆಲಸ ಕಾರ್ಯಗಳಿಗೆ ಹಲವಾರು ಕುಟುಂಬಗಳು ಶಕ್ತಿ ಯೋಜನೆಯಿಂದ ಸದುಪಯೊಗವನ್ನು ಪಡೆಯುತ್ತಿವೆ.  ನಮ್ಮಂತಹ ಬಡ ಕುಟುಂಬಗಳು ಪುಣ್ಯ ಕ್ಷೇತ್ರಗಳ ದರ್ಶನವನ್ನು ಉಚಿತವಾಗಿ ಹೋಗಿ ಮಾಡುತ್ತಿದ್ದು, ಸರ್ಕಾರಕ್ಕೂ ಕೂಡ ಇದರ ಪುಣ್ಯ ಪ್ರಾಪ್ತಿಯಾಗಲಿದೆ.  ಶಕ್ತಿ ಯೋಜನೆ ನೀಡಿದ ಈ ಸರ್ಕಾರಕ್ಕೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks