Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಸ್ಸಾಂ, ಕೇರಳ, ಛತ್ತೀಸ್‌ಗಢ, ಗುಜರಾತ್‌ನಲ್ಲಿ ಭೀಕರ ಪ್ರವಾಹ : 92 ಮಂದಿ ಸಾವು

---Advertisement---

ದೆಹಲಿ.ಆಗಸ್ಟ್.3: ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಅಸ್ಸಾಂ, ಕೇರಳ, ಛತ್ತೀಸ್‌ಗಢ ಮತ್ತು ಗುಜರಾತ್ ಸೇರಿದಂತೆ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿವಿಧ ರಾಜ್ಯಗಳಲ್ಲಿ ಮಳೆ ಹಾಗೂ ಪ್ರವಾಹ ಸಂಬಂಧಿತ ಅನಾಹುತಗಳಿಂದಾಗಿ ಮೃತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.

ಸಾವಿರಾರು ಜನರು ನಿರಾಶ್ರಿತರಾಗಿದ್ದು, ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮನೆಗಳು, ಅಂಗಡಿಗಳು ಮತ್ತು ಸ್ಥಳೀಯ ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿದೆ. ಮುಂಬರುವ ದಿನಗಳಲ್ಲಿ ಭಾರೀ ಮಳೆ ಮತ್ತು ಹಠಾತ್ ಪ್ರವಾಹದ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತೆ ಮುನ್ನೆಚ್ಚರಿಕೆ ನೀಡಿದೆ.

ಅಸ್ಸಾಂ: ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 82ಕ್ಕೆ ಏರಿದೆ. ಶಿವಸಾಗರ, ಗೋಲಾಘಾಟ್, ಜೋರ್ಹಾಟ್, ನಾಗಾಂವ್ ಮತ್ತು ಚರೈದೇವ್ ಸೇರಿದಂತೆ ವಿವಿಧ ಜಿಲ್ಲೆಗಳ 379 ಹಳ್ಳಿಗಳ 1.92 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿವಸಾಗರದ ನೇಪಾಳಿ ಖುಟಿ ಎಂಬಲ್ಲಿ ಸ್ಥಳೀಯರು ಆರು ದೋಣಿಗಳನ್ನು ಬಳಸಿ ಪ್ರವಾಹದಲ್ಲಿ ಸಿಲುಕಿದ್ದ 1,000ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ.

ಕೇರಳ: ಮಳೆ ಸಂಬಂಧಿತ ಘಟನೆಗಳಲ್ಲಿ 8 ಜನರು ಸಾವನ್ನಪ್ಪಿದ್ದು, 8 ಜನರು ನಾಪತ್ತೆಯಾಗಿದ್ದಾರೆ. 5,792 ಜನರನ್ನು 209 ಪರಿಹಾರ ಶಿಬಿರಗಳಿಗೆ ರವಾನಿಸಲಾಗಿದೆ. ಪತ್ತನಂತಿಟ್ಟ ಜಿಲ್ಲೆಯ ರನ್ನಿ ಪಟ್ಟಣದಲ್ಲಿ ಪಂಪಾ ನದಿ ಉಕ್ಕಿ ಹರಿದು ಅನೇಕ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.

ಛತ್ತೀಸ್‌ಗಢ: ಅಬುಜ್‌ಮಾಡ್ ಪ್ರದೇಶದ ನಾರಾಯಣಪುರ ಜಿಲ್ಲೆಯಲ್ಲಿ ಮೇಘಸ್ಫೋಟದಂತಹ ಮಳೆಯಿಂದಾಗಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 16ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.

ಗುಜರಾತ್: ಮಳೆಯು ಸೌರಾಷ್ಟ್ರ ಪ್ರಾಂತ್ಯದತ್ತ ವಿಸ್ತರಿಸಿದ್ದು, ರಾಜ್‌ಕೋಟ್, ಮೊರ್ಬಿ, ಸುರೇಂದ್ರನಗರ ಮತ್ತು ಅಹಮದಾಬಾದ್ ಸೇರಿದಂತೆ 6 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ. ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಹಾರ ನಿಧಿಯನ್ನು ಅನುಮೋದಿಸಿದ್ದಾರೆ. ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾಗೆ ತಲಾ ₹500 ಕೋಟಿ, ಅಸ್ಸಾಂಗೆ ₹379.35 ಕೋಟಿ, ಹಿಮಾಚಲ ಪ್ರದೇಶಕ್ಕೆ ₹193.95 ಕೋಟಿ, ಅರುಣಾಚಲ ಪ್ರದೇಶಕ್ಕೆ ₹44.55 ಕೋಟಿ, ಕೇಂದ್ರ ಗೃಹ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯವಿರುವ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ (NDRF) ತಂಡಗಳನ್ನು ನಿಯೋಜಿಸಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಗೌತಮ್ ಅದಾನಿ ₹11 ಕೋಟಿ ಹಾಗೂ ರಿಲಯನ್ಸ್ ಫೌಂಡೇಶನ್ ₹21 ಕೋಟಿ ದೇಣಿಗೆ ನೀಡಿವೆ.

ಈಶಾನ್ಯ ಭಾರತ ಮತ್ತು ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಮುಂದಿನ 4 ರಿಂದ 5 ದಿನಗಳ ಕಾಲ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಕೇರಳ ಹಾಗೂ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಹಠಾತ್ ಪ್ರವಾಹದ (Flash Floods) ಮುನ್ನೆಚ್ಚರಿಕೆ ನೀಡಲಾಗಿದ್ದು, ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.

Join WhatsApp

Join Now

Join Telegram

Join Now