ಚಿತ್ರದುರ್ಗ. ಏಪ್ರಿಲ್.17: ಶಾಲಾ ಕಾಲೇಜುಗಳ ಆಡಳಿತ ಸಂಸ್ಥೆಗಳು ತಮ್ಮ ಶಿಕ್ಷಣ ಸಂಸ್ಥೆ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ಬಗ್ಗೆ ತೀವ್ರ ನಿಗಾ ವಹಿಸಬೇಕು. ಯಾವುದೇ ಅಕ್ರಮ ಚಟುವಟಿಕೆಗಳು, ವಿದ್ಯಾರ್ಥಿಗಳ ವರ್ತನೆಯಲ್ಲಿ ಅನುಮಾನ ಕಂಡುಬಂದರೆ ಕೂಡಲೆ ಸಂಸ್ಥೆಗಳು ಅಥವಾ ಶಿಕ್ಷಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ NCORD (Narco Coordination center) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಹಾಗೂ ಮಾರಾಟ ಮಾಡುವುದನ್ನು ತಡೆಯಲು ವಿವಿಧ ಇಲಾಖೆಗಳು ಪೊಲೀಸರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಬಕಾರಿ, ಅರಣ್ಯ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಗಾಂಜಾ ಬೆಳೆಯುವ ಪ್ರದೇಶಗಳಲ್ಲಿ ಕಣ್ಗಾವಲು ಇರಿಸುವುದರೊಂದಿಗೆ, ಕೂಂಬಿಂಗ್ ಕಾರ್ಯಾಚರಣೆ ನಡೆಸಬೇಕು ಎಂದು ಟಿ.ವೆಂಕಟೇಶ್ ನಿರ್ದೇಶಿಸಿದರು.
ಅಕ್ರಮ ಮದ್ಯ ಮಾರಾಟ ಲೈಸೆನ್ಸ್ ಅಮಾನತು :
ಹಿರಿಯೂರು ತಾಲ್ಲೂಕು ಕಂದಿಕೆರೆ ಗ್ರಾಮದ ಪ್ರಾವಿಜನ್ ಸ್ಟೋರ್ ಒಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಪ್ರಾವಿಜನ್ ಸ್ಟೋರ್‍ಗೆ ಮದ್ಯ ಸರಬರಾಜು ಮಾಡಿದ ಮದ್ಯದ ಅಂಗಡಿಯ ಲೈಸೆನ್ಸ್ (ಸನ್ನದು) ಅಮಾನತು ಮಾಡಲು ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಲ ತಿಂಗಳ ಹಿಂದೆ ಚಿತ್ರದುರ್ಗ ನಗರಸಭೆಯಲ್ಲಿ ತೆರವಾಗಿದ್ದ ವಾರ್ಡ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆ ದಿನದಂದು ನಗರದಲ್ಲಿ ಮದ್ಯ ಮಾರಾಟ ಮಾಡದಂತೆ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಆದರೆ ನಿಷೇಧಾಜ್ಞೆ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ ಮದ್ಯದ ಅಂಗಡಿ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ವೈದ್ಯರು ನೀಡುವ ಔಷಧ ಚೀಟಿ ಇಲ್ಲದೆ, ಪ್ರಲೋಭಕ ಔಷಧಗಳನ್ನು ಮಾರಾಟ ಮಾಡುವಂತಿಲ್ಲ. ಈ ಕುರಿತು ಜಿಲ್ಲೆಯ ಎಲ್ಲಾ ಔಷಧ ಅಂಗಡಿಗಳ ಮಾಲಿಕರೊಂದಿಗೆ ಸಭೆ ನಡೆಸಿ ಎಚ್ಚರಿಕೆ ನೀಡಬೇಕು. ಒಂದು ವೇಳೆ ವೈದ್ಯರ ಶಿಫಾರಸು ಚೀಟಿ ಇಲ್ಲದೆಯೇ ಪ್ರಲೋಭಕ ಔಷಧಗಳನ್ನು ಮಾರಾಟ ಮಾಡುವುದು ಕಂಡುಬಂದರೆ, ಅವರ ಪರವಾನಿಗೆಯನ್ನು ರದ್ದು ಪಡಿಸಲು ಶಿಫಾರಸ್ಸು ಮಾಡುವಂತೆ ಜಿಲ್ಲಾ ಔಷಧ ನಿಯಂತ್ರಕರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ವೈದ್ಯರ ಶಿಫಾರಿಸ್ಸಿನ ಮೇರೆಗೆ ಪ್ರಲೋಭಕ ಔಷಧಗಳನ್ನು ಪಡೆಯುತ್ತಿರುವವರ ಆಧಾರ್ ಕಾರ್ಡ್ ಅನ್ನು ದಾಖಲೆಗಾಗಿ, ಪಡೆದು ಔಷಧಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ವಿತರಿಸಿ ಔಷಧಗಳ ಪ್ರಮಾಣದ ಲೆಕ್ಕವಿಡಲು ಔಷಧ ಅಂಗಡಿಗಳಿಗೆ ನಿರ್ದೇಶನ ನೀಡುವಂತೆ ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಜಿಲ್ಲಾ ಔಷಧ ನಿಯಂತ್ರಕರಿಗೆ ಈ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಮಾದಕ ವ್ಯಸನ ಹಾಗೂ ಅಪರಾಧ ಕೃತ್ಯಗಳಿಗೆ ನೇರ ಸಂಬಂಧಿದೆ. ಮಾದಕ ವ್ಯಸನಿಗಳು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದರಿಂದ ಕೊಲೆ, ಅತ್ಯಾಚಾರ ಮುಂತಾದ ಅಪರಾಧ ಕೃತ್ಯವೆಸಗುತ್ತಾರೆ. ಮಾದಕ ಸೇವನೆಯ ದುಷ್ಪರಿಣಾಮ, ಅಪರಾಧ ಹಾಗೂ ಕಾನೂನಿನ ಬಗ್ಗೆ ರಜೆಯ ಬಳಿಕ ಶಾಲಾ ಕಾಲೇಜುಗಳು ಪ್ರಾರಂಭಗೊಂಡ ನಂತರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮಿಕೊಳ್ಳಲಾಗುವುದು. ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ ಅನಧಿಕೃತವಾಗಿ ವೈದ್ಯರ ಚೀಟಿ ಇಲ್ಲದೆ ಪ್ರಲೋಭಕ ಔಷಧ ಟಾಕ್ಸೆಕ್ಸ್ ಸಿರಪ್ ಮಾರಾಟ ಮಾಡುವ ಜಾಲ ಪತ್ತೆ ಹೆಚ್ಚಲಾಗಿದೆ. ಬಳ್ಳಾರಿಯ ವ್ಯಕ್ತಿಯೋರ್ವ ಜಿಲ್ಲೆಯಲ್ಲಿ ಅನಧಿಕೃತವಾಗಿ 9 ಸಾವಿರ ಟಾಕ್ಸೆಕ್ಸ್ ಸಿರಪ್ ಸರಬರಾಜು ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಜಾಲ 5 ವರ್ಷಗಳಿಂದ ಬಳ್ಳಾರಿ, ರಾಯದುರ್ಗ ಹಾಗೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದೆ. ವಿವಿಧ ಇಲಾಖೆಗಳ ಸಮನ್ವಯತೆ ಹಾಗೂ ಗುಪ್ತಚರ ಮಾಹಿತಿಯನ್ನು ಬಲಪಡಿಸುವುದರೊಂದಿಗೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲಗಳನ್ನು ಭೇದಿಸಿ ನಿಷ್ಕ್ರಿಯಗೊಳಿಸಲಾಗುತ್ತಿದೆ. ಸಾರ್ವಜನಿಕರು, ಶಿಕ್ಷಕರು ವಿದ್ಯಾರ್ಥಿಗಳು ಮಾದಕ ವಸ್ತುಗಳ ಮಾರಾಟದ ಬಗ್ಗೆ ಡ್ರಗ್ ಫ್ರೀ ಕರ್ನಾಟಕ ಆಪ್ ಮೂಲಕ ದೂರು ನೀಡಬಹುದು. ದೂರು ನೀಡುವವರ ವಿವರ ಬಹಿರಂಗಕ್ಕೆ ಇಲ್ಲಿ ಅವಕಾಶವಿಲ್ಲ, ಅಂತಹವರ ಮಾಹಿತಿ ಗೌಪ್ಯವಾಗಿರುತ್ತದೆ ಎಂದರು.
ನಾರ್ಕೋಟಿಕ್ ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ವೆಂಕಟೇಶ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 40 ಹಾಗೂ ಪ್ರಸಕ್ತ ಸಾಲಿನಲ್ಲಿ 30 ಗಾಂಜಾ ಸೇವೆನೆ ಪ್ರಕರಣಗಳು ದಾಖಲಾಗಿವೆ. ಯಾವುದೇ ರೀತಿಯ ವೈದ್ಯಕೀಯ ಹಾಗೂ ರಾಸಾಯನಿಕ ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟದ ಪ್ರಕರಣಗಳು ದಾಖಲಾಗಿಲ್ಲ. ನಾಯಕನಹಟ್ಟಿ, ರಾಂಪುರ, ರಾಮಗಿರಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಚೆಂಡೂ ಹೂ, ತೊಗರಿ ಬೆಳೆಗಳ ಮದ್ಯ ಹಾಗೂ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಲಾಗಿದೆ. ಇದರ ಹೊರತಾಗಿ ನಗರ ಪ್ರದೇಶದಲ್ಲಿ ಮಾತ್ರೆ ಹಾಗೂ ಕೆಲವು ಕೆಮ್ಮಿನ ಔಷಧ, ಸಲ್ಯೂಷನ್‍ಗಳ ಸೇವೆನೆ ಮಾಡುತ್ತಿರುವುದು ಬೆಳಕಿಗೆ ಬಂದಿವೆ. ಪದೇ ಪದೇ ಗಾಂಜಾ ಸೇವಿಸುವರನ್ನು ಜಿಲ್ಲಾಸ್ಪತ್ರೆಯ ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿ ವ್ಯಸನಿಗಳಿಗೆ ಸಮರ್ಪಕ ಚಿಕಿತ್ಸೆ ದೊರಕುತ್ತಿಲ್ಲ ಎಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಿಗೆ ಈ ಬಗ್ಗೆ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಔಷಧ ನಿಯಂತ್ರಕ ಗಿರೀಶ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳು ಪ್ರಾಂಶುಪಾಲರು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















