ದೆಹಲಿ: ಫ್ಲೈದುಬೈ FZ1073 ವಿಮಾನದಲ್ಲಿ ಎದುರಾದ ಭೀಕರ ಅಪಾಯವನ್ನು ತಪ್ಪಿಸಿ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಅಪ್ರತಿಮ ಧೈರ್ಯಸಾಹಸಕ್ಕೆ ಭಾರಿ ಮನ್ನಣೆ ದೊರೆತಿದೆ. ಅವರ ಸಮಯಪ್ರಜ್ಞೆ ಮತ್ತು ಕೆಚ್ಚೆದೆಯನ್ನು ಶ್ಲಾಘಿಸಿರುವ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಮ್ಯಾನ್ಕೈಂಡ್ ಫಾರ್ಮಾ, ಕ್ಯಾಪ್ಟನ್ ಮಚ್ಚಾರ್ ಹಾಗೂ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿಗಳ ನಗದು ಪುರಸ್ಕಾರವನ್ನು ಘೋಷಿಸಿದೆ.
ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ FZ1073 ವಿಮಾನದ ಕಾಕ್ಪಿಟ್ನಲ್ಲಿ ಇಬ್ಬರು ಪೈಲಟ್ಗಳ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಸೌದಿ ಮತ್ತು ಇಸ್ರೇಲ್ ಅಧಿಕಾರಿಗಳ ಮಾಹಿತಿ ಪ್ರಕಾರ, ಸಹ-ಪೈಲಟ್ (ಕೋ-ಪೈಲಟ್) ಏಕಾಏಕಿ ಕ್ಯಾಪ್ಟನ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ ನಿಯಂತ್ರಣ ತಪ್ಪಿದ ವಿಮಾನವು ಕ್ಷಣಮಾತ್ರದಲ್ಲಿ ಭಾರಿ ಪ್ರಮಾಣದಲ್ಲಿ ಕೆಳಮುಖವಾಗಿ ಧಾವಿಸತೊಡಗಿತು.
ತೀವ್ರ ರಕ್ತಸ್ರಾವ ಹಾಗೂ ಗಾಯಗಳ ನಡುವೆಯೂ ಧೃತಿಗೆಡದ ಕ್ಯಾಪ್ಟನ್ ಮಚ್ಚಾರ್, ಹೇಗೋ ಮಾಡಿ ಕಾಕ್ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳನುಗ್ಗಿ, ದಾಳಿ ನಡೆಸಿದ ಕೋ-ಪೈಲಟ್ನನ್ನು ಹಿಡಿದು ನಿಯಂತ್ರಣಕ್ಕೆ ತೆಗೆದುಕೊಂಡರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣಕ್ಕೆ ತುರ್ತಾಗಿ ಸುರಕ್ಷಿತವಾಗಿ ತಿರುಗಿಸಿ ಲ್ಯಾಂಡ್ ಮಾಡಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಫ್ಲೈದುಬೈ ಅಧಿಕೃತವಾಗಿ ತಿಳಿಸಿದ್ದು, ಘಟನೆಯ ಹಿಂದಿನ ಕಾರಣ ಮತ್ತು ಉದ್ದೇಶಗಳ ಕುರಿತು ಪೂರ್ಣ ಪ್ರಮಾಣದ ತನಿಖೆ ನಡೆಯುತ್ತಿದೆ.
ಗಾಯಗೊಂಡಿರುವ ಕ್ಯಾಪ್ಟನ್ ಮಚ್ಚಾರ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಈ ಮಧ್ಯೆ, ಫೆಡರೇಶನ್ ಆಫ್ ಇಂಡಿಯನ್ ಪೈಲಟ್ಸ್ ಸಂಸ್ಥೆಯು ಕ್ಯಾಪ್ಟನ್ ಮಚ್ಚಾರ್ ಅವರಿಗೆ ವಿಶೇಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇತ್ತ ತಮ್ಮ ಸ್ವಂತ ಸುರಕ್ಷತೆಗಿಂತ ಪ್ರಯಾಣಿಕರ ಹಾಗೂ ಸಿಬ್ಬಂದಿಯ ಜೀವ ರಕ್ಷಣೆಗೆ ಆದ್ಯತೆ ನೀಡಿದ ಮಚ್ಚಾರ್ ಅವರ ಕರ್ತವ್ಯನಿಷ್ಠೆಯನ್ನು ಕೊಂಡಾಡಿರುವ ಮ್ಯಾನ್ಕೈಂಡ್ ಫಾರ್ಮಾ ಸಂಸ್ಥೆಯು ಅವರಿಗೆ ಈ ಭಾರಿ ಮೊತ್ತದ ಬಹುಮಾನವನ್ನು ಪ್ರಕಟಿಸಿದೆ.
Capt. Smit Machchhar put his crew and every passenger before himself. That is true leadership.
As a humble gesture of gratitude, Mankind Pharma is contributing ₹1 crore to him and his family.
You have made India proud. We salute you. 🇮🇳#CaptSmitMachchhar pic.twitter.com/75pdk5iZqn
— Mankind Pharma (@Pharma_Mankind) October 2, 2026












