ಚಿತ್ರದುರ್ಗ. ಎಪ್ರಿಲ್.15 : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದೆ. ಸರ್ಕಾರದ ಮಟ್ಟದಲ್ಲಿ ಹೊಸ ಪಿಂಚಣಿ ಯೋಜನೆ ಬದಲು ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಹೇಳಿದರು.

ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ನೌಕರರ ಹಿತ ಕಾಪಾಡುವಲ್ಲಿ ಬದ್ದವಾಗಿದೆ. ನೌಕರರು ಉತ್ತಮವಾಗಿ ಕೆಲಸ ನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಈ ಮೂಲಕ ಸರ್ಕಾರಕ್ಕೆ ಉತ್ತಮ ಹೆಸರು ತರಬೇಕು. ಪ್ರತಿನಿತ್ಯ ಸಾರ್ವಜನಿಕರ ಒಡನಾಟದಲ್ಲಿರುವ ಸರ್ಕಾರಿ ನೌಕರರು ಇಂತಹ ಕ್ರೀಡಾ ಕೂಟಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೇಲಾಧಿಕಾರಿಗಳು, ಸರ್ಕಾರ, ಜನಪ್ರನಿಧಿಗಳು ಹಾಗೂ ಸಾರ್ವಜನಿಕರು ನಿಮ್ಮಿಂದ ಹೆಚ್ಚಿನ ಕೆಲಸವನ್ನು ನಿರೀಕ್ಷಿಸುತ್ತಾರೆ. ನೀವು ದೈಹಿಕ ಹಾಗೂ ಮಾನಸಿಕವಾಗಿ ಸಧೃಡವಾಗಿದ್ದರೆ ಉತ್ಸಾಹದಿಂದ ಕೆಲಸ ಮಾಡಬಹುದು. ಕ್ರೀಡೆಗಳು ದೈಹಿಕ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ ಎಂದು ಕೆ.ಸಿ.ವಿರೇಂದ್ರ ಪಪ್ಪಿ ತಿಳಿಸಿದರು.

ನಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಇಂಬು ನೀಡುವ ನಿಟ್ಟಿನಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲಾಗಿದೆ. ಹೊಸ ಟ್ರ್ಯಾಕ್ ಹಾಗೂ ಈಜುಕೊಳ ನವೀಕರಣ ಮಾಡಲಾಗಿದೆ. ವಾಲ್ ಕ್ಲೈಬಿಂಗ್ ನಿರ್ಮಾಣದ ಟೆಂಡರ್ ಕರೆಯಲಾಗಿದೆ. ಫುಟ್ಬಾಲ್ ಮೈದಾನ ನಿರ್ಮಿಸುವ ಕಾರ್ಯವು ಪ್ರಗತಿಯಲ್ಲಿದೆ. ಕ್ರೀಡಾ ಸಚಿವರು ಹಾಗೂ ಉಸ್ತುವಾರಿ ಸಚಿವರು ಕ್ರೀಡಾಂಗಣ ಅಭಿವೃದ್ಧಿಗೆ ತಲಾ ರೂ.1 ಕೋಟಿ ಅನುದಾನ ನೀಡಿದ್ದಾರೆ. ಇದರೊಂದಿಗೆ ಕ್ರೀಡಾಂಗಣದ ಸರ್ವತೋಮುಖ ಅಭಿವೃದ್ದಿ ಇನ್ನು ಹೆಚ್ಚಿನ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ನೀಡಲಾಗುವುದು. ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸರ್ಕಾರಿ ನೌಕರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ನೌಕರರು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಪಾಲ್ಗೊಂಡು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತರುವಲ್ಲಿ ಪ್ರಯತ್ನಿಸಬೇಕು ಎಂದು ಕೆ.ಸಿ.ವಿರೇಂದ್ರ ಪಪ್ಪಿ ಹೇಳಿದರು.
ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಸರ್ಕಾರಿ ನೌಕರರು ಅತ್ಯಂತ ಒತ್ತಡದಲ್ಲಿ ಬದುಕು ನಡೆಸುತ್ತಿದ್ದಾರೆ. ಸಾರ್ವಜನಿಕರು, ಮೇಲಾಧಿಕಾರಿಗಳು, ಜನಪ್ರತಿನಿಧಿಗಳ ಒತ್ತಡಗಳ ನಡುವೆ ಸಂಸಾರವನ್ನು ಸಹ ನಿಭಾಯಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ. ಸರ್ಕಾರಿ ನೌಕರರಲ್ಲಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಸರ್ಕಾರಿ ನೌಕರರ ಕ್ರೀಡಾ ಕೂಟ ಸಹಕಾರಿಯಾಗಿದೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ಮನೋಲ್ಲಾಸ, ಮನೋಸ್ಥೆöÊರ್ಯ, ದೈಹಿಕ ಶಕ್ತಿ ಸಹ ನೌಕರರಲ್ಲಿ ವೃದ್ದಿಯಾಗುತ್ತದೆ, ಅಲ್ಲದೆ ಕೆಲಸ ನಿರ್ವಹಿಸಲು ಹೆಚ್ಚಿನ ಸ್ಫೂರ್ತಿ ದೊರಕಲಿದೆ. ಚಿತ್ರದುರ್ಗ ಜಿಲ್ಲೆ ಮೊದಲಿನಿಂದಲೂ ಕ್ರೀಡೆಗೆ ಹೆಸರು ವಾಸಿಯಾಗಿದೆ. ಚಿತ್ರದುರ್ಗ ಪಾಳೇಗಾರರಲ್ಲಿ ವಂಶಪಾರಂಪರ್ಯ ರಾಜಕಾರಣದ ಬದಲಿಗೆ, ಕ್ರೀಡೆ ಹಾಗೂ ಶೌರ್ಯದಲ್ಲಿ ಉತ್ತಮ ಸಾಧನೆ ತೋರಿದವರನ್ನು ಪಾಳೇಗಾರನನ್ನಾಗಿ ಆಯ್ಕೆ ಮಾಡುವ ಪದ್ದತಿ ಇತ್ತು. ಇಂತಹ ಜಿಲ್ಲೆಯಲ್ಲಿ ನೀವೆಲ್ಲರೂ ಸರ್ಕಾರಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಪುಣ್ಯದ ವಿಷಯವಾಗಿದೆ. ಕರ್ತವ್ಯವನ್ನು ಜನರ ಸೇವೆಗಾಗಿ ಮುಡುಪಾಗಿರಿಸಿ ಉತ್ತಮ ಅಧಿಕಾರಿ ಹಾಗೂ ನೌಕರರು ಎಂದು ಹೆಸರು ಗಳಿಸುವಂತೆ ಕೆ.ಎಸ್.ನವೀನ್ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ರಾಜ್ಯ ಸರ್ಕಾರ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿದರೆ, ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ. ನೌಕರರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗಮನ ಹರಿಸಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧ್ಯಕ್ಷ ಮಾಲತೇಶ್ ಮುದಜ್ಜಿ,
ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಮಹಿಬೂಬ್ ಜಿಲಾನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ಎಂ.ನೆಲವಗಿ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ವಿವಿಧ ಪದಾಧಿಕಾರಿಗಳು, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.

