ಮೈಸೂರು: ಇಂದು ನಾಡಿನೆಲ್ಲೆಡೆ ದಸರಾ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ರಾಜ ವಂಶದಲ್ಲಿಯೂ ಖುಷಿ ಹೆಚ್ಚಾಗಿದೆ. ಮೈಸೂರು ರಾಜಮನೆತನಕ್ಕೆ ಮತ್ತೊಬ್ಬ ವಾರಸುದಾರ ಬಂದಾಗಿದೆ. ತ್ರಿಷಿಕಾ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತ್ರಿಷಿಕಾ ದೇವಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಕಳೆದ ಒಂದು ವಾರದಿಂದಲೂ ಅರಮನೆಯಲ್ಲಿ ದಸರಾ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಆ ಸಂಭ್ರಮ ಇಂದು ದುಪ್ಪಟ್ಟಾಗಿದೆ. ಯದುವೀರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿದೆ. ಅರಮನೆಯಲ್ಲಿ ಆಯುಧ ಪೂಜೆ ಹಾಗೂ ಖಾಸಗಿ ದರ್ಬಾರ್ ನಡೆದಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣಾಧಾರಿಗಳಾಗಿದ್ದಾರೆ.
ಒಡೆಯರ ಪತ್ನಿ ತ್ರಿಷಿಕಾ ಅವರು ರಾಜಸ್ಥಾನದ ಡುಂಗರಪುರ ರಾಜ ವಂಶಸ್ಥರು. 2016ರ ಜೂನ್ 27 ರಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತ್ರಿಷಿಕಾ ದೇವಿ ಅವರನ್ನು ಮದುವೆಯಾಗಿದ್ದರು. ಇದೀಗ ಎರಡನೇ ಮಗುವಿನ ಆಗಮನವಾಗಿದೆ. ಈ ಬೆಳವಣಿಗೆಯನ್ನು ನೋಡಿದಾಗ ಮೈಸೂರು ಮಹಾರಾಜರಿಗೆ ಇದ್ದಂತ ಶಾಪ ಮುಕ್ತಿಯಾಗಿದೆ ಎಂದೇ ಎನಿಸುತ್ತಿದೆ. ಯಾಕಂದ್ರೆ ಆಲಮೇಲಮ್ಮ ಶಾಪ ನೀಡಿದ್ದರು. ಮಾಲಂಗಿ ಮಡುವಾಗಿ, ತಲಕಾಡು ಮರುಳಾಗಿ,ಮೈಸೂರು ಮಹಾರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡಿದ್ದರು. ಆ ಶಾಪದಿಂದ ಮೈಸೂರು ಮಹಾರಾಜರಿಗೆ ಮಕ್ಕಳಾಗಿರಲಿಲ್ಲ. ಯದುವೀರ್ ಅವರನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಯದುವೀರ್ ಅವರಿಗೆ ಎರಡು ಗಂಡು ಮಕ್ಕಳು ಜನಿಸಿದ್ದಾರೆ. ಈ ಮೂಲಕ ಶಾಪ ಮುಕ್ತವಾಗಿದೆ ಎನ್ನಲಾಗುತ್ತಿದೆ.