Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಖಾಸಗಿ ಶಾಲೆಗಳಲ್ಲಿ ಶುಲ್ಕ ವಿವರ ಪ್ರಕಟಣೆ ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ

---Advertisement---

ಬೆಂಗಳೂರು.ಆಗಸ್ಟ್.7: ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಶುಲ್ಕದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಶುಲ್ಕ ಸಂಗ್ರಹ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಶಿಕ್ಷಣ ಹಕ್ಕು ಕಾಯಿದೆ (RTE)-2009ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯುಕ್ತರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ.

ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 2(b) ಪ್ರಕಾರ, ಎಲ್ಲಾ ಖಾಸಗಿ ಶಾಲೆಗಳು ತಾವು ನಿಗದಿಪಡಿಸಿದ ಹಾಗೂ ಅಧಿಸೂಚಿಸಿದ ಶುಲ್ಕದ ವಿವರಗಳನ್ನು ಶಾಲಾ ಜಾಲತಾಣ, ಶಾಲಾ ಸೂಚನಾ ಫಲಕ ಮತ್ತು ಇಲಾಖೆಯ SATS ಜಾಲತಾಣದಲ್ಲಿ ಸಾರ್ವಜನಿಕರು ಹಾಗೂ ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸುವುದು ಕಡ್ಡಾಯವಾಗಿದೆ. ಶಾಲೆಯು ನಿಗದಿಪಡಿಸಿದ ಶುಲ್ಕವನ್ನು ಹೊರತುಪಡಿಸಿ ಹೆಚ್ಚುವರಿ ದೇಣಿಗೆ ಅಥವಾ ವಂತಿಗೆ ಪಡೆದರೆ ಅದನ್ನು ‘ಕ್ಯಾಪಿಟೇಶನ್ ಫೀ’ ಎಂದು ಪರಿಗಣಿಸಲಾಗುತ್ತದೆ.

ಸೇರ್ಪಡೆ/ದಾಖಲಾತಿ ವೇಳೆ ಯಾವುದೇ ರೀತಿಯ ಕ್ಯಾಪಿಟೇಶನ್ ಫೀ ವಸೂಲಿ ಮಾಡುವುದು ಹಾಗೂ ಮಗು ಅಥವಾ ಪೋಷಕರನ್ನು ಯಾವುದೇ ತರಹದ ಸ್ಕ್ರೀನಿಂಗ್ (ಪರೀಕ್ಷೆ/ಸಂದರ್ಶನ) ಪ್ರಕ್ರಿಯೆಗೆ ಒಳಪಡಿಸುವುದನ್ನು ಕಾಯಿದೆಯ ಸೆಕ್ಷನ್ 13 (1) ರ ಅಡಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಒಂದು ವೇಳೆ ನಿಯಮ ಉಲ್ಲಂಘಿಸಿ ಕ್ಯಾಪಿಟೇಶನ್ ಫೀ ವಸೂಲಿ ಮಾಡಿದ್ದು ಕಂಡುಬಂದರೆ, ಸಂಗ್ರಹಿಸಿದ ಶುಲ್ಕದ 10 ಪಟ್ಟು ದಂಡ ವಿಧಿಸಲಾಗುತ್ತದೆ. ಹಾಗೆಯೇ ಸ್ಕ್ರೀನಿಂಗ್ ಪ್ರಕ್ರಿಯೆ ನಡೆಸಿದರೆ ಮೊದಲ ತಪ್ಪಿಗೆ 25,000 ರೂಪಾಯಿ ಹಾಗೂ ನಂತರದ ಪ್ರತಿಯೊಂದು ಉಲ್ಲಂಘನೆಗೆ 50,000 ರೂಪಾಯಿಗಳವರೆಗೆ ದಂಡ ವಿಧಿಸಲು ಕಾಯಿದೆಯಲ್ಲಿ ಅವಕಾಶವಿದೆ. ನಿಯಮ ಉಲ್ಲಂಘನೆಯ ಕುರಿತು ದೂರುಗಳು ಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷಣ ಹಕ್ಕು ನಿಯಮಗಳು-2012ರ ಅಡಿಯಲ್ಲಿ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.

Join WhatsApp

Join Now

Join Telegram

Join Now