ಬೆಂಗಳೂರು.ಆಗಸ್ಟ್ 6: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಮುಂಬರುವ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಕೂರಿಸುವುದಕ್ಕೆ ಪೂರ್ಣ ಪ್ರಮಾಣದಲ್ಲಿ ನಿಷೇಧ ಹೇರಲಾಗಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ರವಾನಿಸಲಾಗಿದ್ದು, ಜಲಮೂಲಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಪರಿಸರ ಸ್ನೇಹಿ ಮಣ್ಣಿನ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಕೆರೆಗಳಲ್ಲಿ ಅವಕಾಶ ನೀಡುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಪಿಒಪಿ ತಯಾರಿಕೆಯಲ್ಲಿ ಬಳಕೆಯಾಗುವ ಕ್ಯಾಲ್ಸಿಯಂ, ಸಲ್ಫೇಟ್, ಹೆಮಿಹೈಡ್ರೇಟ್ ಪುಡಿಗಳಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂನಂತಹ ಅಪಾಯಕಾರಿ ಅಂಶಗಳಿರುತ್ತವೆ. ಜೊತೆಗೆ ಮೂರ್ತಿಗಳಿಗೆ ಬಳಸುವ ರಾಸಾಯನಿಕ ಬಣ್ಣಗಳಲ್ಲಿ ಪಾದರಸ, ಕ್ಯಾಡ್ಮಿಯಂ, ಸೀಸ ಹಾಗೂ ಇಂಗಾಲ ಸೇರಿರುವುದರಿಂದ ಇದು ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ ಎಂದು ಸಚಿವರ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.










