ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದರೂ, ಅವರ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಕುಟುಂಬದ ಮೂಲಗಳ ಪ್ರಕಾರ, ಚೆನ್ನಮ್ಮ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪೆರೋಲ್ ಅಥವಾ ತಾತ್ಕಾಲಿಕ ಬಿಡುಗಡೆಗಾಗಿ ಯಾವುದೇ ಅರ್ಜಿ ಸಲ್ಲಿಸದಿರಲು ಕುಟುಂಬವೇ ತೀರ್ಮಾನಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ಅವರನ್ನು ಈ ಸಂದರ್ಭದಲ್ಲಿ ಹೊರಗೆ ಕರೆತರುವುದರಿಂದ ಕುಟುಂಬಕ್ಕೆ ಹಾಗೂ ಸಾರ್ವಜನಿಕ ವಲಯದಲ್ಲಿ ಅನಗತ್ಯ ಚರ್ಚೆ ಮತ್ತು ಮುಜುಗರ ಉಂಟಾಗಬಹುದು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ಕುರಿತು ತಂದೆ ಎಚ್.ಡಿ. ರೇವಣ್ಣ ಅವರ ಸಲಹೆಯನ್ನು ಪ್ರಜ್ವಲ್ ಗೌರವಿಸಿದ್ದು, ಪೆರೋಲ್‌ಗಾಗಿ ಕಾನೂನು ಕ್ರಮ ಕೈಗೊಳ್ಳದಿರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ, ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧನದಲ್ಲಿರುವ ಆರೋಪಿಗಳಿಗೆ ಪೆರೋಲ್ ಅಥವಾ ತಾತ್ಕಾಲಿಕ ಬಿಡುಗಡೆ ದೊರೆಯುವುದು ಸುಲಭವಲ್ಲ. ಪ್ರಕರಣದ ಸ್ವರೂಪ ಹಾಗೂ ಕಾನೂನು ನಿಯಮಗಳನ್ನು ಪರಿಗಣಿಸಿದರೆ, ಮಧ್ಯಂತರ ರಿಲೀಫ್ ದೊರೆಯುವ ಸಾಧ್ಯತೆ ಕೂಡ ಕಡಿಮೆಯಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ನಡುವೆ, ಪ್ರಜ್ವಲ್ ರೇವಣ್ಣ ಅವರ ಪರವಾಗಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಅಂಶು ಕುಮಾರ್ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.ಕುಟುಂಬದ ಅಂತಿಮ ವಿಧಿವಿಧಾನಗಳನ್ನು ನೇರವಾಗಿ ನೋಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಮಾನವೀಯ ದೃಷ್ಟಿಯಿಂದ ಕಾರಾಗೃಹದಲ್ಲೇ ದೂರದರ್ಶನದ ಮೂಲಕ ಅಂತ್ಯಕ್ರಿಯೆಯ ನೇರಪ್ರಸಾರ ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಸಮೀಪದ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು, ಕಿರಿಯ ಪುತ್ರ ರಮೇಶ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.









