ಬೆಂಗಳೂರು : ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಿಂದ ಬರೋಬ್ಬರಿ 99 ಲಕ್ಷಕ್ಕೂ ಅಧಿಕ ಮತದಾರರನ್ನು ಕೈಬಿಟ್ಟ ಬೆನ್ನಲ್ಲೇ, ಇದೀಗ ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ನಡೆಸುವಂತೆ ಆದೇಶ ನೀಡಿದೆ.
ಪಟ್ಟಿಯಿಂದ ಕೈಬಿಟ್ಟು ಹೋದ ಅರ್ಹ ಮತದಾರರು ಹಾಗೂ ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುತ್ತಿರುವ ಯುವಜನರನ್ನು ಸೇರ್ಪಡೆ ಮಾಡುವ ಪ್ರಮುಖ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪರಿಷ್ಕರಣೆಯ ಪ್ರಮುಖ ದಿನಾಂಕಗಳು
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಡಿಸೆಂಬರ್ 1 ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಸಾರ್ವಜನಿಕ ಪ್ರಕ್ರಿಯೆ ಆರಂಭವಾಗಲಿದೆ. ಆಕ್ಷೇಪಣೆಗಳು ಹಾಗೂ ಹಕ್ಕುಗಳನ್ನು ಮಂಡಿಸಲು ಸಾರ್ವಜನಿಕರಿಗೆ ಡಿಸೆಂಬರ್ 31 ರವರೆಗೆ ಅವಕಾಶ ನೀಡಲಾಗಿದೆ. ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಂಡ ಬಳಿಕ, ಜನವರಿ 20 ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಆಯೋಗವು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ರೂಪಿಸಿದೆ. ಒಂದು ಮತಗಟ್ಟೆ ವ್ಯಾಪ್ತಿಯಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಕರಣಗಳು ಕಂಡುಬಂದರೆ ಅಥವಾ ಒಬ್ಬ ವ್ಯಕ್ತಿಯೇ ಐದಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದರೆ, ಚುನಾವಣಾ ನೋಂದಣಾಧಿಕಾರಿಗಳು (ಇಆರ್ಒ) ಖುದ್ದಾಗಿ ಪರಿಶೀಲನೆ ನಡೆಸುವುದು ಕಡ್ಡಾಯವಾಗಿದೆ.
ಯಾವುದೇ ಒಬ್ಬ ಮತದಾರನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವಾಗ ಅಧಿಕಾರಿಗಳು ಅದಕ್ಕೆ ಸೂಕ್ತ ಕಾರಣವನ್ನು ನೀಡಿ ಆದೇಶ ಹೊರಡಿಸಬೇಕು. ಅಷ್ಟೇ ಅಲ್ಲದೆ, ಬಾಧಿತ ವ್ಯಕ್ತಿಗೆ ವಿಚಾರಣೆಗೆ ಅವಕಾಶ ನೀಡಿ, ಆ ಆದೇಶವನ್ನು ಚುನಾವಣಾ ಆಯೋಗದ ‘ಇಸಿನೆಟ್’ (ECINET) ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ. ಇದರ ಜೊತೆಗೆ, ಈ ವಿಶೇಷ ಪರಿಷ್ಕರಣಾ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ಡಿಸೆಂಬರ್ 1 ರಿಂದ ಜನವರಿ 20 ರವರೆಗೆ ಚುನಾವಣಾ ಆಯೋಗದ ಮುಕ್ತ ಅನುಮತಿ ಇಲ್ಲದೆ ವರ್ಗಾವಣೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












