ಬೆಂಗಳೂರು : ಮಹಿಳೆಯರ ಮಧ್ಯವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸೂಕ್ತ ಆರೈಕೆ ಮತ್ತು ವೈದ್ಯಕೀಯ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಋತು ತಾರೆ’ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಮಹಿಳೆಯರ ಆರೋಗ್ಯಕಾಳಜಿಗೆ ಆಸರೆಯಾಗುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈ ಯೋಜನೆಯನ್ನು ರೂಪಿಸಿದೆ.
35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವಿಶೇಷ ಆದ್ಯತೆ
35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸಮಗ್ರ ಆರೋಗ್ಯ ತಪಾಸಣೆ ಹಾಗೂ ಋತುಬಂಧದ ಆರೈಕೆಗೆ ಈ ಕಾರ್ಯಕ್ರಮದಲ್ಲಿ ವಿಶೇಷ ಒತ್ತು ನೀಡಲಾಗಿದೆ. ಋತುಬಂಧದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಸಮಗ್ರ ಆರೈಕೆ ನೀಡುವುದರ ಜೊತೆಗೆ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತದೆ. ಸಮಗ್ರ ಆರೋಗ್ಯ ತಪಾಸಣೆ ಹಾಗೂ ಸೂಕ್ತ ವೈದ್ಯಕೀಯ ಮಾರ್ಗದರ್ಶನವನ್ನು ಈ ಯೋಜನೆಯಡಿ ಒದಗಿಸಲಾಗುತ್ತಿದ್ದು, ವೈಯಕ್ತಿಕ ಆರೋಗ್ಯ ವಿವರಗಳ ದಾಖಲಾತಿಗಾಗಿ ‘ಮಿಡ್-ಲೈಫ್ ಹೆಲ್ತ್ ಕಾರ್ಡ್’ ವಿತರಿಸಲಾಗುತ್ತದೆ.
ಬುಧವಾರದಂದು ವಿಶೇಷ ಚಿಕಿತ್ಸಾ ಶಿಬಿರಗಳು
ಈ ಕಾರ್ಯಕ್ರಮದಡಿ ಪ್ರತಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗುತ್ತದೆ. ಈ ಶಿಬಿರಗಳಲ್ಲಿ ರಕ್ತದೊತ್ತಡ, ಮಧುಮೇಹ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹಾಗೂ ಬೊಜ್ಜಿನ ಸಮಸ್ಯೆಗಳ ಕುರಿತು ತಪಾಸಣೆ ಮಾಡಲಾಗುತ್ತದೆ. ಆರೋಗ್ಯ ತಪಾಸಣೆಯ ಜೊತೆಗೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ತಜ್ಞರಿಂದ ಸಮಾಲೋಚನೆ ಒದಗಿಸಲಾಗುತ್ತದೆ.
ಆಶಾ ಕಾರ್ಯಕರ್ತೆಯರ ಮಾರ್ಗದರ್ಶನ ಹಾಗೂ ಪ್ರಾಯೋಗಿಕ ಅನುಷ್ಠಾನ
ಮಹಿಳೆಯರಿಗೆ ಆರೋಗ್ಯ ಸೇವೆಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನವನ್ನು ಆಶಾ ಕಾರ್ಯಕರ್ತೆಯರು ನೀಡಲಿದ್ದಾರೆ. ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿರುವ ‘ಋತು ತಾರೆ’ ಕಾರ್ಯಕ್ರಮವು ಮಹಿಳೆಯರು ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಲು ನೆರವಾಗಲಿದೆ. ಪ್ರತಿ ಮಹಿಳೆಗೂ ಆರೋಗ್ಯಕರ ಹಾಗೂ ಗೌರವಯುತ ಬದುಕು ಕಲ್ಪಿಸುವುದು ರಾಜ್ಯ ಸರ್ಕಾರದ ಬದ್ಧತೆಯಾಗಿದ್ದು, ಆರೋಗ್ಯಕರ ಬದುಕಿಗೆ ಈ ಯೋಜನೆ ಹೊಸ ಭರವಸೆ ಮೂಡಿಸಿದೆ.












