ಚೆನ್ನೈ : ಎಂ.ಎಸ್. ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಆಟಗಾರನ ಸ್ಥಾನಕ್ಕೆ ವಿದಾಯ ಹೇಳಿದ್ದು, 2027ರ ಐಪಿಎಲ್‌ನಿಂದ ಫ್ರಾಂಚೈಸಿಯ ಮೆಂಟರ್ ಆಗಿ ತಮ್ಮ ಹೊಸ ಅಧ್ಯಾಯವನ್ನು ಆರಂಭಿಸಲಿದ್ದಾರೆ.
ಧೋನಿ ಇಲ್ಲದೆ ಸಿಎಸ್ಕೆ ಇಲ್ಲ
ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್. ಶ್ರೀನಿವಾಸನ್ ಅವರು ಧೋನಿ ಮತ್ತು ಫ್ರಾಂಚೈಸಿಯ ನಡುವಿನ ಅವಿನಾಭಾವ ಸಂಬಂಧವನ್ನು ಸ್ಮರಿಸಿಕೊಂಡಿದ್ದಾರೆ. ಎಂ.ಎಸ್. ಧೋನಿ ಇಲ್ಲದೆ ಸಿಎಸ್ಕೆ ಇಲ್ಲ, ಸುಮಾರು ಎರಡು ದಶಕಗಳಿಂದ ನಾವು ಜೊತೆಯಾಗಿ ಬೆಳೆದಿದ್ದೇವೆ. ನಮ್ಮ ಈ ಸಂಬಂಧ ಇಷ್ಟು ಬಲವಾಗಿರಲು ಪರಸ್ಪರರ ಮೇಲಿನ ನಂಬಿಕೆಯೇ ಮುಖ್ಯ ಕಾರಣ. 2008ರಲ್ಲಿ ಧೋನಿ ಅವರನ್ನು ಸಿಎಸ್ಕೆ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ನಾನು ಪಟ್ಟು ಹಿಡಿದಿದ್ದೆ. ಕೇವಲ ಅವರ ಸಾಧನೆಗಳಿಗಾಗಿ ಮಾತ್ರವಲ್ಲದೆ, ಅವರೊಬ್ಬ ಅತ್ಯುತ್ತಮ ವ್ಯಕ್ತಿ ಎಂಬ ಕಾರಣಕ್ಕಾಗಿ ಆ ನಿರ್ಧಾರ ಸರಿಯಾಗಿತ್ತು. ಧೋನಿ ಯಾವಾಗಲೂ ನಮ್ಮ ತಂಡದ ಅಸ್ಮಿತೆಯ ಭಾಗವಾಗಿರುತ್ತಾರೆ ಹಾಗೂ ಇದು ಸದಾ ಅವರ ಮನೆಯಾಗಿರುತ್ತದೆ ಎಂದು ಅವರು ಭಾವುಕರಾಗಿ ನುಡಿದರು.
OFFICIAL ANNOUNCEMENT 🦁💛
A once-in-a-lifetime player.
A new role. A bond that lasts forever 💛
Mahendra Singh Dhoni takes charge as the Team Mentor of Chennai Super Kings!
Through countless victories, challenging times, and memories that will stay in our hearts forever, MS… pic.twitter.com/TA5Qfrq4dI
— Chennai Super Kings (@ChennaiIPL) November 17, 2026
ಯುವ ಆಟಗಾರರಿಗೆ ಧೋನಿಯ ಮಾರ್ಗದರ್ಶನ
ಸಿಎಸ್ಕೆ ಮಾಲೀಕರಾದ ರೂಪಾ ಗುರುನಾಥ್ ಅವರು ಮಾತನಾಡಿ, ಧೋನಿಯವರಂತಹ ಆಟಗಾರರು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬರುತ್ತಾರೆ. ತಂಡದ ಆರಂಭದಿಂದಲೂ ಅವರು ನಮ್ಮೊಂದಿಗಿರುವುದು ಮತ್ತು ತಂಡದ ಬುನಾದಿಯಾಗಿರುವುದು ನಮ್ಮ ಸೌಭಾಗ್ಯ. ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಅವರು ನಮಗೆ ನೀಡಿದ ಕೊಡುಗೆ ಅಪಾರವಾದುದು. ಅವರ ನಾಯಕತ್ವ, ವಿನಯತೆ ಮತ್ತು ಅಭಿಮಾನಿಗಳೊಂದಿಗಿನ ಒಡನಾಟ ನಿಜಕ್ಕೂ ಅದ್ಭುತ. ಮುಂಬರುವ ದಿನಗಳಲ್ಲಿ ಮೆಂಟರ್ ಆಗಿ ಅವರ ಅಪಾರ ಅನುಭವ, ಬದಲಾವಣೆಯ ಈ ಹಂತದಲ್ಲಿ ಯುವ ಆಟಗಾರರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚೆನ್ನೈ ನಗರದ ಅವಿಭಾಜ್ಯ ಅಂಗ
ಚೆನ್ನೈ ಸೂಪರ್ ಕಿಂಗ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ವಿಶ್ವನಾಥನ್ ಅವರು ಪ್ರತಿಕ್ರಿಯಿಸಿ, ಧೋನಿ ಕೇವಲ ಕ್ರಿಕೆಟಿಗನಾಗಿ ಸಾಧನೆ ಮಾಡಿದ್ದಷ್ಟೇ ಅಲ್ಲದೆ ಸಂಪೂರ್ಣವಾಗಿ ಚೆನ್ನೈ ನಗರದ ಒಂದು ಭಾಗವಾಗಿಯೇ ಬೆರೆತುಹೋದರು. ಅವರು ನಗರವನ್ನು ಅಪ್ಪಿಕೊಂಡರು ಮತ್ತು ನಗರವು ಅವರನ್ನು ತನ್ನವನೆಂದು ಸ್ವೀಕರಿಸಿತು. ನಾವು ಗೆದ್ದ ಟ್ರೋಫಿಗಳಿಗಿಂತ ಹೆಚ್ಚಾಗಿ, ಅದನ್ನು ನಾವು ಹೇಗೆ ಗೆದ್ದೆವು ಎಂಬುದು ಅವರ ನಿಜವಾದ ಪರಂಪರೆಯಾಗಿದೆ. ಮೈದಾನದಲ್ಲಿ ಹಳದಿ ಜೆರ್ಸಿಯಲ್ಲಿ ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೂ, ಮುಂದಿನ ದಿನಗಳಲ್ಲಿ ಅವರು ನಮ್ಮ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂಬುದು ನಮಗೆ ಸಂತಸ ತಂದಿದೆ ಎಂದರು.
ಐಪಿಎಲ್ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಗಳು
ಎಂ.ಎಸ್. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿದ್ದು, ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ನಾಯಕರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಎರಡು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನೂ ಗೆದ್ದುಕೊಟ್ಟಿದ್ದಾರೆ. ಸಿಎಸ್ಕೆ ಪರ 272 ಪಂದ್ಯಗಳನ್ನು ಆಡಿರುವ ಅವರು 5,314 ರನ್ ಗಳಿಸುವ ಮೂಲಕ ತಂಡದ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಅವರ ಹೆಲಿಕಾಪ್ಟರ್ ಶಾಟ್‌ಗಳು ಹಾಗೂ ಕೊನೆಯ ಎಸೆತದಲ್ಲಿ ಪಂದ್ಯವನ್ನು ಗೆಲ್ಲಿಸಿದ ರೋಚಕ ಕ್ಷಣಗಳು ಸಿಎಸ್ಕೆ ಮತ್ತು ಐಪಿಎಲ್ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿವೆ.















