ಚಿತ್ರದುರ್ಗ. ಜುಲೈ. 01:ಜಿಲ್ಲಾ ಖಜಾನೆ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಜಿಲ್ಲಾ ಪೊಲೀಸ್ ಸೈಬರ್ ಠಾಣೆ ವತಿಯಿಂದ ನಗರದ ನಿವೃತ್ತ ನೌಕರರ ಭವನದಲ್ಲಿ ನಿವೃತ್ತ ನೌಕರರಿಗಾಗಿ ಪಿಂಚಣಿ ಮತ್ತು ಸೈಬರ್ ಅಪರಾಧಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಜಿಲ್ಲಾ ಖಜಾನೆಯ ಉಪ ನಿರ್ದೇಶಕ ಹೆಚ್.ಟಿ.ಅಶೋಕ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಅಧೀಕ್ಷಕ ಪಿ.ಎಂ. ಪ್ರಭುಕುಮಾರ್ ಅವರು ಪಿಂಚಣಿಗೆ ಸಂಬಂಧಿಸಿದ ವಿವಿಧ ಪ್ರಮುಖ ವಿಷಯಗಳಾದ ಪ್ರಥಮ ಪಿಂಚಣಿ ಪಾವತಿ, ಕುಟುಂಬ ಪಿಂಚಣಿ, 80 ವರ್ಷ ದಾಟಿದವರಿಗೆ ಹೆಚ್ಚುವರಿ ಪಿಂಚಣಿ, ಪಿಂಚಣಿಗಳ ಮರು ನವೀಕರಣ ಮತ್ತು ಅಂತರ ಜಿಲ್ಲಾ ವರ್ಗಾವಣೆ ಕುರಿತು ವಿವರವಾದ ಮಾಹಿತಿ ನೀಡಿದರು. ಇದರೊಂದಿಗೆ ಕಮ್ಯುಟೇಷನ್ ಮರು ಸ್ಥಾಪನೆ, ಜೀವಿತಾವಧಿ ಪಿಂಚಣಿ, ಪರಿಷ್ಕøತ ಪಿಂಚಣಿ ಪಾವತಿ, ಜೀವಂತ ಪ್ರಮಾಣ ಪತ್ರ ಸಲ್ಲಿಕೆ, ಕುಟುಂಬ ಪಿಂಚಣಿದಾರರ ಜನ್ಮ ದಿನಾಂಕ ದೃಢೀಕರಣ, ಹೆಸರುಗಳ ತಿದ್ದುಪಡಿ ಹಾಗೂ ಬ್ಯಾಂಕ್ಗಳಲ್ಲಿ ಪಿಂಚಣಿ ಪಾವತಿ ವಿಧಾನಗಳ ಬಗ್ಗೆ ನಿವೃತ್ತ ನೌಕರರಿಗೆ ತಿಳಿಸಿಕೊಡಲಾಯಿತು.

ಸೈಬರ್ ಠಾಣೆಯ ಲೋಕೇಶ್ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ವಂಚನೆಗಳಾದ ಹೂಡಿಕೆ ವಂಚನೆ, ಸಾಲ ನೀಡುವ ನೆಪದಲ್ಲಿ ನಡೆಯುವ ಮೋಸಗಳು, ಅಪರಿಚಿತ ಲಿಂಕ್ಗಳು, ನಕಲಿ ಖಾತೆಗಳು, ಡೀಪ್ ಫೇಕ್ ತಂತ್ರಜ್ಞಾನ, ಲಾಟರಿ ಮತ್ತು ಉಡುಗೊರೆ ಹೆಸರಿನಲ್ಲಿ ನಡೆಯುವ ವಂಚನೆಗಳು, ಆನ್ಲೈನ್ ಹಣ ವರ್ಗಾವಣೆ ಮತ್ತು ಉದ್ಯೋಗದ ಹೆಸರಿನಲ್ಲಿ ನಡೆಯುವ ವಂಚನೆಗಳ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆಯ ಸಿಬ್ಬಂದಿಗಳಾದ ಫಕೀರಪ್ಪ ಹೆಚ್., ವೆಂಕಟೇಶ್ ರೆಡ್ಡಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಟಿ. ಪ್ರೇಮನಾಥ್, ಖಜಾಂಚಿ ಬೈಯಣ್ಣ, ಗೌರವಾಧ್ಯಕ್ಷ ಚಂದ್ರಶೇಖರಯ್ಯ ಹಾಗೂ ಸೈಬರ್ ಠಾಣೆಯ ಅಧಿಕಾರಿಗಳಾದ ಕೆಂಚಪ್ಪ, ದಿವಾಕರ್ ಮತ್ತು ನಿವೃತ್ತ ನೌಕರರು ಉಪಸ್ಥಿತರಿದ್ದರು.




















