ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಪಂಡರಹಳ್ಳಿ ಬೆಟ್ಟವು ಚಿತ್ರದುರ್ಗದಿಂದ 12 ಕಿಲೋಮೀಟರ್ ದೂರ ನೈರುತ್ಯಕ್ಕೆ ,ಚಿತ್ರದುರ್ಗ -ಹೊಳಲ್ಕೆರೆ ಮುಖ್ಯ ರಸ್ತೆಯ ಜಾನುಕೊಂಡ ಗೇಟ್ ನಿಂದ 3 ಕಿ.ಮೀ.ದೂರದಲ್ಲಿದೆ. ಸಂರಕ್ಷಿತ ಅರಣ್ಯ ತಾಣವಾದ ಇದನ್ನು ದೇವರ ಕಾಡು ಎಂದು ಪರಿಣಿಸಲಾಗಿದ್ದು ಈ ಬೆಟ್ಟದ ಸುತ್ತಮುತ್ತಲೂ ಹತ್ತಾರು ದೇವರುಗಳ ದೇವಾಲಯಗಳಿದ್ದು ಇದನ್ನು ಪವಿತ್ರ ಸ್ಥಳವೆಂದು ನಂಬಲಾಗಿದೆ. ಈ ಎಲ್ಲಾ ದೇವಾಲಯಗಳು ಪ್ರಾಚೀನ ಕಾಲದಿಂದಲೂ ಇದ್ದು ಇಲ್ಲಿನ ದೇವರುಗಳಿಗೆ ಅಪಾರ ಭಕ್ತರು ನಡೆದುಕೊಳ್ಳುತ್ತಾರೆ. .
ಬೆಟ್ಟದ ಮೇಲ್ಭಾಗದಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಿಸಲಾದ ನೀರಿನ ಹೊಂಡ ಹಾಗೂ ನೈಸರ್ಗಿಕ ಹೊಂಡಗಳಿದ್ದು ಸದಾ ಕಾಲ ನೀರಿನಿಂದ ತುಂಬಿರುತ್ತದೆ.
ಎಂತಹ ಬರಗಾಲದ ಪರಿಸ್ಥಿತಿಯಲ್ಲೂ ಇಲ್ಲಿ ನೀರಿನ ಲಭ್ಯತೆ ಲಭ್ಯವಿದ್ದು ಇದು ದೇವರ ಕೃಪೆ ಎಂದು ಪರಿಗಣಿಸಲಾಗುತ್ತದೆ. ಬೆಟ್ಟದ ದಕ್ಷಿಣ ಭಾಗದಲ್ಲಿ ಈ ದೇವಾಲಯಗಳಿದ್ದರೆ ಉತ್ತರ ಭಾಗದಲ್ಲಿ ಆಕಳೇರಮ್ಮ ಹಾಗೂ ಈಶ್ವರ ದೇವಾಲಯಗಳಿವೆ. ಇದೊಂದು ಬೃಹತ್ ಗುಡ್ಡದ ಸಾಲು ಆಗಿದ್ದು ಒಂದೊಂದು ದೇವಾಲಯಕ್ಕೂ ಒಂದೊಂದು ಪ್ರತ್ಯೇಕ ಕಾಲುದಾರಿಗಳಿವೆ. ಈಶ್ವರ ಹಾಗೂ ಆಕಳೇರಮ್ಮ ದೇವಾಲಯಕ್ಕೆ ಕಾಲು ದಾರಿಯಲ್ಲಿ ಮಾತ್ರ ತಲುಪಲು ಸಾಧ್ಯ. ಅಲ್ಲಿಗೆ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ.
ರಸ್ತೆಯಿಂದ ಬೆಟ್ಟದ ಮೇಲಿನ ದೇವಸ್ಥಾನವನ್ನು ತಲುಪಲು ಉತ್ತಮ ಟಾರ್ ರಸ್ತೆ ಹಾಗೂ ಕಾಲುದಾರಿ- ಮೆಟ್ಟಿಲುಗಳ ಮೂಲಕ ಇಲ್ಲಿಗೆ ತಲುಪಬಹುದು.ಚಿತ್ರದುರ್ಗದ ಬೆಟ್ಟದ ಸಾಲಿಗೆ ಹೊಂದಿಕೊಂಡಂತೆ ಸಾಧಾರಣ ಎತ್ತರದ ಬೆಟ್ಟದ ಸಾಲು ಇದಾಗಿದೆ. ರಸ್ತೆಯಿಂದಲೇ ಬೆಟ್ಟವು ಪ್ರಾರಂಭವಾಗುತ್ತದೆ. ಹಸಿರು ತುಂಬಿದ ಬೆಟ್ಟದ ವಾತಾವರಣ ಅತ್ಯಂತ ಸುಂದರವಾಗಿ ಗೋಚರಿಸುತ್ತದೆ. ಬೆಟ್ಟವನ್ನು ಹತ್ತುವ ಮಾರ್ಗದಲ್ಲಿ ಸಾವಿರಾರು ಚಿಕ್ಕ ಚಿಕ್ಕ ಕಲ್ಲಿನ ರಾಶಿ ಕಾಣುತ್ತದೆ .
ಈ ರಾಶಿಗೆ ಪೂಜಾರಿ ಗುಡ್ಡೆ (ಗಡ್ಡೆ)ಎಂದು ಕರೆಯುತ್ತಾರೆ. ಇದು ಪೂಜಾರಿಯ ಸಮಾಧಿಯಂತೆ.ಆದರೆ ಇಲ್ಲಿಗೆ ಹೋದವರೆಲ್ಲ ಈ ಗುಡ್ಡೆಗೆ ಒಂದು ಕಲ್ಲು ಹಾಕುವ ಸಂಪ್ರದಾಯ ಬೆಳೆದು ಬಂದು ಇಲ್ಲಿ ಕಲ್ಲಿನ ರಾಶಿಯೇ ಬಿದ್ದಿದೆ.
ಇಲ್ಲಿರುವ ಮಂದಿರಗಳ ಪರಿಚಯ :
1.ಭೀಮೇಶ್ವರ ದೇವಸ್ಥಾನ:
ಗ್ರಾಮದ ಪೂರ್ವಕ್ಕೆ ಪಂಡರಹಳ್ಳಿ ಬೆಟ್ಟದ ಮೇಲೆ ಭೀಮೇಶ್ವರ ದೇವಸ್ಥಾನವು ಕಾಲುದಾರಿಯ ಮೆಟ್ಟಿಲುಗಳಲ್ಲಿ ಹೋಗುವ ಮಾರ್ಗದಲ್ಲಿ ಸಿಗುತ್ತದೆ .ಈ ಲಿಂಗವನ್ನು ಹಿಂದೆ ಪಾಂಡವರ ಕಾಲದಲ್ಲಿ ಭೀಮನು ಪ್ರತಿಷ್ಟಾಪಿಸಿದನೆಂಬ ಪ್ರತೀತಿಯಿದೆ.
ಕ್ರಿಸ್ತಶಕ 11 -12 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು,ಪಶ್ಚಿಮಾಭಿಮುಖವಾಗಿದೆ.ಬೃಹದಾಕಾರದ ಬಂಡೆಯ ಕೆಳಗಡೆ ಒಂದು ಗುಹೆಯದೆ.
ಈ ಗುಹಾಲಯದಲ್ಲಿ 4 ಅಡಿ ಅಗಲ,6 ಅಡಿ ಉದ್ದ ಹಾಗೂ 3 ಅಡಿ ಎತ್ತರದ ಪ್ರತಿಷ್ಠಾಪನಾ ಶಿವಲಿಂಗವಿದೆ .
ಇದರ ಮುಂದೆ ನಂದಿಯನ್ನು ಪ್ರತಿಷ್ಠಾಪಿಸಿರುವರು.ಈ ದೇವಾಲಯದ ಮುಂದಿನ ಬಂಡೆಗಲ್ಲಿನ ಮೇಲೆ ಕ್ರಿಸ್ತಶಕ ಏಳನೆಯ ಶತಮಾನದ ಹಳೆಗನ್ನಡದ ಶಾಸನವಿದೆ.
ಈ ಶಾಸನದಲ್ಲಿ ಚಂದಿಯಮ್ಮರಸ ದೇವರಿಗೆ ಶ್ರೀ ಬಿಜೋಬೆ ಎಂಬುವವಳು ಸುಳ್ಗಲ್ನಾಡು ಪಿಟ್ಟಗೆರೆಯ ಭೂಮಿಯನ್ನು ಕಾವಾಳಿಗ ಭಟಾರರಿಗೆ ದಾನ ನೀಡಿದ ವಿವರವಿದೆ.ಶ್ರೀ ಬಿಜೋಬೆಯು ಬಾದಾಮಿ ಚಾಲುಕ್ಯ ಕಾಲದ ವಿಜ್ಜಿಕೆ ಅಥವಾ ವಿಜಯಭಟ್ಟಾರಿಕೆ ಎಂಬುದಾಗಿ ಹೇಳಲಾಗುತ್ತದೆ.ಈ ಹಿನ್ನೆಲೆಯಲ್ಲಿ ಇವಳು ಪ್ರಾಚೀನ ಕರ್ನಾಟಕದಲ್ಲಿ ದೇವರಿಗೆ ದಾನ ನೀಡಿದ ಮೊಟ್ಟ ಮೊದಲ ಸ್ತ್ರೀ ಎನ್ನಬಹುದು.

2.ಶ್ರೀ ಲಕ್ಷ್ಮಿ ಪಾಂಡುರಂಗನಾಥ ಸ್ವಾಮಿ :
ಈ ದೇವಾಲಯವು ಪಂಡರಹಳ್ಳಿ ಬೆಟ್ಟದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಪಾಂಡುರಂಗನಾಥಸ್ವಾಮಿ ದೇವಾಲಯವು 17 -18ನೇ ಶತಮಾನದಲ್ಲಿ ಪಾಳೆಗಾರರ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ .ಇದನ್ನು ಭರಮಣ್ಣನಾಯಕನ ಕಾಲದಲ್ಲಿ ಆತನ ಪಾರುಪತ್ಯೆಗಾರ ದಾಸಯ್ಯನು ನಿರ್ಮಿಸಿದನೆಂದು ತಿಳಿಯುತ್ತದೆ.
ಗರ್ಭಗೃಹ ,ಅಂತರಾಳ, ನವರಂಗಗಳಿಂದ ಕೂಡಿದ ವಿಶಾಲ ದೇವಾಲಯವಿದು. ಗರ್ಭಗೃಹದಲ್ಲಿ 5 ಅಡಿ ಎತ್ತರದ ರಂಗನಾಥನ ಶಿಲ್ಪವಿದೆ. ಸಮಭಂಗಿಯಲ್ಲಿ ನಿಂತಿರುವ ರಂಗನಾಥನ ಮೇಲಿನ ಕೈಗಳಲ್ಲಿ ಶಂಖ ,ಚಕ್ರಗಳನ್ನು ,ಕೆಳಗಿನ ಕೈಗಳು ವರದ ಹಾಗೂ ಕಟಿಹಸ್ತ ಮುದ್ರೆಯಲ್ಲಿವೆ.ಕೆಳಭಾಗಕ್ಕೆ ಇಕ್ಕೆಲಗಳಲ್ಲಿ ರಾಧೆ-ರುಕ್ಮಿಣಿಯರ ಉಬ್ಬುಗೆತ್ತನೆಗಳಿವೆ.ಗರ್ಭಗೃಹ ಹಾಗೂ ಅಂತರಾಳದಲ್ಲಿ ಯಾವುದೇ ಅಲಂಕರಣೆಗಳಿರುವುದಿಲ್ಲ. ನವರಂಗದಲ್ಲಿ ನಾಲ್ಕು ಕಂಬಗಳಿವೆ.
ಇದನ್ನು ನಾಲ್ಕು ಮತ್ತು ಹದಿನಾರು ಮುಖಗಳಲ್ಲಿ ಕಡೆದಿರುವರು. ಮೇಲ್ಭಾಗದಲ್ಲಿ ಪುಷ್ಪ ಬೋದಿಗೆಗಳಿವೆ. ಕಂಬಗಳಲ್ಲಿ ವಿವಿಧ ಉಬ್ಬುಶಿಲ್ಪಗಳಿವೆ.ನವರಂಗದ ಪೂರ್ವ ಹಾಗೂ ದಕ್ಷಿಣ ಬಾಗಿಲುವಾಡಗಳಲ್ಲಿ ವೈಷ್ಣವ ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ.ದೇವಾಲಯದ ಮುಂಭಾಗದಲ್ಲಿ ಕಲ್ಲಿನ ದೀಪಮಾಲೆ ಕಂಬ ಹಾಗೂ ಯಜ್ಞಕುಂಡವಿದೆ. ದೇವಾಲಯದ ಪಕ್ಕದಲ್ಲಿ ಆಂಜನೇಯಸ್ವಾಮಿ, ನರಸಿಂಹಸ್ವಾಮಿ ದೇವಾಲಯವಿದೆ.ಗುಡಿಯ ಎದುರಿಗೆ ಕೆಂಪು ವರ್ಣದ ನೀರಿನ ಚಿಕ್ಕ ಕೊಳವಿದೆ.
ಇದರಿಂದ ಸ್ವಲ್ಪ ಮೇಲಕ್ಕೆ ಹೋದರೆ ಮತ್ತಷ್ಟು ವಿಶಾಲವಾದ ದೊಡ್ಡ ಹೊಂಡವಿದೆ.ಈ ಹೊಂಡದಲ್ಲಿ ಶ್ರಾವಣಮಾಸದಲ್ಲಿ ರಂಗನಾಥಸ್ವಾಮಿಯ ದೀಪೋತ್ಸವ ಹಾಗೂ ತೆಪ್ಪೋತ್ಸವಗಳನ್ನು ನಡೆಸುತ್ತಾರೆ.
3.ಶ್ರೀಲಕ್ಷ್ಮಿ ದೇವಾಲಯ:
ಇಲ್ಲಿನ ಪಾಂಡುರಂಗನಾಥ ಸ್ವಾಮಿ ದೇವಾಲಯದ ಹಿಂಭಾಗದ ಪ್ರಾಂಗಣದಲ್ಲಿರುವ ಶ್ರೀ ಲಕ್ಷ್ಮಿ ದೇವಾಲಯವು 17- 18 ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ, ಸಭಾಮಂಟಪವಿರುವ ಚಿಕ್ಕ ದೇವಾಲಯವಿದು.
ಈ ದೇಗುಲದ ಗರ್ಭಗೃಹದಲ್ಲಿ ಮೂರು ಅಡಿ ಎತ್ತರದ ಲಕ್ಷ್ಮಿಯ ಶಿಲ್ಪವಿದೆ .
ಸುಖಾಸನದಲ್ಲಿ ಕುಳಿತಿರುವ ಲಕ್ಷ್ಮಿಯು ನಾಲ್ಕು ಕೈಗಳನ್ನು ಹೊಂದಿದ್ದಾಳೆ.ಲಕ್ಷ್ಮಿಯು ಕಮಲದ ಹೂವಿನಲ್ಲಿ ಕುಳಿತಿರುವಳು. ರಾಮನವಮಿಯಲ್ಲಿ ವಿಶೇಷ ಉತ್ಸವ- ಆಚರಣೆ ಜರುಗುತ್ತದೆ. ಉತ್ಸವದ ಕೊನೆಯ ದಿನದಂದು ನಡೆಯುವ ಓಕುಳಿಯ ನಂತರ ಲಕ್ಷ್ಮಿಗುಡಿಯ ಬಾಗಿಲನ್ನು ಹಾಡು ಹೇಳುವ ಮೂಲಕ ತೆಗೆಸುತ್ತಾರೆ .
ಈ ಸಂದರ್ಭದಲ್ಲಿ ಹೊರಗೆ ಒಬ್ಬರು ಒಳಗೆ ಒಬ್ಬರು ಹಾಡನ್ನು ಹೇಳುವ ಸಂಪ್ರದಾಯ ಮುಂದುವರೆದಿದೆ.
ಈ ಮಂದಿರದ ಆವರಣದಲ್ಲಿ ಸಮುದಾಯ ಭವನವಿದ್ದು,ಆಗಾಗ ಶುಭ ಸಮಾರಂಭಗಳು ನಡೆಯುತ್ತಿರುತ್ತದೆ.
ಸುತ್ತಮುತ್ತಲ ವಾತಾವರಣವು ಅತ್ಯಂತ ಚೇತೋಹಾರಿಯಾಗಿದ್ದು ಬೆಳಗಿನ ಅಥವಾ ಸಂಜೆ ಸಮಯ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯವಾಗಿದ್ದು ಇಲ್ಲಿನ ಪ್ರಕೃತಿಯು ಎಂತಹ ಚಿಂತೆಯನ್ನು ಮರೆಸುವ ಗುಣಲಕ್ಷಣವನ್ನು ಹೊಂದಿದೆ. ಪ್ರಕೃತಿಯಲ್ಲಿ ಲೀನವಾದಂತೆ ಭಾಸವಾಗುತ್ತದೆ. ಅದರಲ್ಲೂ ಮಳೆಗಾಲದ ನಂತರ ಅತ್ಯಂತ ಸುಂದರ ಹಸಿರಸಿರಿಯನ್ನು ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಕಾಣಬಹುದು. ಅದರಲ್ಲೂ ಸೂರ್ಯಾಸ್ತಮಾನ ಅತ್ಯಂತ ರಮಣೀಯವಾಗಿ ಈ ಸ್ಥಳದಿಂದ ಗೋಚರಿಸುತ್ತದೆ. ಗೌಜು ಗದ್ದಲದಿಂದ ದೂರವಾಗಿ ಪ್ರಕೃತಿಯಲ್ಲಿ ಇರಲು ಬಯಸುವವರಿಗೆ ಇದೊಂದು ಸುಂದರ ಸ್ಥಳವಾಗಿದ್ದು ಹಕ್ಕಿಪಕ್ಷಿಗಳ ಕಲರವ ನವಿಲುಗಳ ಓಡಾಟ ಅತ್ಯಂತ ಹತ್ತಿರದಿಂದ ಗಮನಿಸಬಹುದು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















