ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ
ಮೊ : 93424 66936
ಸುದ್ದಿಒನ್,
ಚಿತ್ರದುರ್ಗ ನಗರದ ಕೋಟೆಯ ಪೂರ್ವ ದಿಕ್ಕಿನ ಮುಖ್ಯ ಪ್ರವೇಶ ದ್ವಾರವೇ ರಂಗಯ್ಯನ ಬಾಗಿಲು.
16-17 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಬಾಗಿಲು ಇಂಡೋ-ಸಾರ್ಸೇನಿಕ್ ಶೈಲಿಯ ಪ್ರಮುಖ ಬಾಗಿಲಾಗಿದೆ. 15 ಅಡಿಗಳಷ್ಟು ಎತ್ತರವಿದ್ದು, ಮೇಲ್ಛಾವಣಿ ಸಂಪೂರ್ಣ ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿಸಲಾಗಿದೆ.
ಸಂಪೂರ್ಣ ಶಿಲಾಮಯವಾದ ಗೋಡೆಗಳು ಇದನ್ನು ಆವರಿಸಿ ಸುತ್ತಲೂ ಮುಂದುವರೆದಿದೆ. ಈ ದ್ವಾರಕ್ಕೆ ಸಿರಾ ದರ್ವಾಜಾ ಬಾಗಿಲು ,ಫತೇ ದರ್ವಾಜಾ..ಎಂಬ ಹೆಸರುಗಳಿದ್ದವು .
ಸಿರಾ(ತುಮಕೂರು ಜಿಲ್ಲೆ)ದ ಕಡೆಗೆ ಇರುವ ಕಾರಣಕ್ಕೆ ಸಿರಾ ದರ್ವಾಜಾ ಬಾಗಿಲು ಎಂಬ ಹೆಸರು ಬಂದಿದೆ.

ಹಿಂದೆ ಈ ದ್ವಾರವು ಹಳೆ ಊರನ್ನು ಹೊಂದಿತ್ತು .
ಆದರೆ ಇಂದು ಈ ಬಾಗಿಲನ್ನು ದಾಟಿ ಚಿತ್ರದುರ್ಗ ನಗರವು ಬೃಹದಾಕಾರವಾಗಿ ಬೆಳವಣಿಗೆಯಾಗಿದೆ. ಕೋಟೆಯ ಹೊರಸುತ್ತಿನ (ಮೊದಲನೇ ಸುತ್ತು) ಪ್ರಮುಖ ದ್ವಾರವಾದ ರಂಗಯ್ಯನ ಬಾಗಿಲು ಹಿಂದೆ ಚಿತ್ರದುರ್ಗದ ಪ್ರವೇಶಕ್ಕೆ ಪ್ರಮುಖ ದ್ವಾರವಾಗಿದ್ದು, ಕೋಟೆಯ ಪೂರ್ವ ದಿಕ್ಕಿನಲ್ಲಿದೆ .
ದಾವಣಗೆರೆ ಜಿಲ್ಲೆಯ ಆನಗೋಡು ಹೋಬಳಿಯ ನೀರ್ಥಡಿ ರಂಗನಾಥ ಸ್ವಾಮಿ ದೇವರ ಹೆಸರಿನಲ್ಲಿ ಈ ಬಾಗಿಲಿಗೆ ರಂಗಯ್ಯನ ಬಾಗಿಲು ಎನ್ನಲಾಗುತ್ತದೆ.ಇದನ್ನು ಕಸ್ತೂರಿ ರಂಗಪ್ಪನಾಯಕನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.ಹಿಂದೆ ಇದರ ಇಕ್ಕೆಲಗಳಲ್ಲಿ ಆಳವಾದ ಕಂದಕಗಳಿದ್ದವು.ಈಗ ಅವುಗಳನ್ನು ಮುಚ್ಚಲಾಗಿದೆ.ದ್ವಾರದ ಎರಡೂ ಬದಿಗಳಲ್ಲಿ ಇದ್ದ ದಿಡ್ಡಿ ಬಾಗಿಲನ್ನು ಮುಚ್ಚಿ ಶ್ರೀ ರಾಮ ಮತ್ತು ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ.
ಸುಂದರ ಬಾಗಿಲು ಹೊಂದಿರುವ ಇದರ ಗೋಡೆಗಳನ್ನು ಭಾರಿ ಶಿಲೆಗಳಿಂದ ನಿರ್ಮಿಸಲಾಗಿದ್ದು, 25 ಅಡಿಗಳಷ್ಟು ಎತ್ತರವಿದೆ.ಇದರ ಎಡ-ಬಲ ಭಾಗದಲ್ಲಿ ಸುಂದರ ಕಾವಲು ಗೋಪುರಗಳನ್ನು ಇಂದಿಗೂ ಕಾಣಬಹುದು.
ಕಳೆದ ದಶಕದಿಂದ ಈಚೆಗೆ ಇದರ ಮುಂಭಾಗದಲ್ಲಿ ಮರಗಿಡಗಳ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ.ಯುದ್ಧದಲ್ಲಿ ಜಯಶಾಲಿಯಾಗಿ ಬರುತ್ತಿದ್ದ ರಾಜರನ್ನು ಈ ದ್ವಾರದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಗುತ್ತಿತ್ತು.
ಈ ಬಾಗಿಲ ಒಳಗಿನ ಕೊಠಡಿಯಲ್ಲಿ ಹಿಂದೆ ಪಾಳೆಯಗಾರರ ಕಾಲದಲ್ಲಿ ತಪಾಸಣಾ ಠಾಣೆ ಇದ್ದಿತು.
ಆದರೆ ಈಗ ಇಲ್ಲಿ ಕರ್ನಾಟಕ ಸರ್ಕಾರದ ಸ್ಥಳೀಯ ಪ್ರಾಚ್ಯ ವಸ್ತು ಇಲಾಖೆಯ ಕಚೇರಿಯಿದೆ.ಜೊತೆಗೆ ವಸ್ತು ಸಂಗ್ರಹಾಲಯವೂ ಇದೆ.ಇದನ್ನು 1951 ರಲ್ಲಿ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರು ಅವರ ಸಂಶೋಧನೆಯ ಸಮಯದಲ್ಲಿ ದೊರೆತ ಶಾಸನ, ವೀರಗಲ್ಲು, ಅಮೂಲ್ಯ ಹಸ್ತಪ್ರತಿ, ನಾಣ್ಯಗಳು… ಮುಂತಾದವುಗಳನ್ನು ಸಂಗ್ರಹಿಸಿ ಪ್ರಾರಂಭಿಸಿದರು.ಅವರೇ ಇದಕ್ಕೆ ಕ್ಯೂರೆಟರ್ ಕೂಡ ಆಗಿದ್ದರು.ಇದನ್ನು ಅಂದಿನ ಮೈಸೂರಿನ ರಾಜ್ಯಪಾಲರಾದ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟನೆ ಮಾಡಿದ್ದರು.
ಸಂಗ್ರಹಾಲಯದ ಹೊರಭಾಗದಲ್ಲಿ ಇದಕ್ಕೆ ಹೊಂದಿಕೊಂಡಿರುವ ಅಂಕಣದಲ್ಲಿ ಶಾಸನಗಳು, ವೀರಗಲ್ಲುಗಳು, ಭಗ್ನ ಶಿಲ್ಪಗಳು, ಜಿಲ್ಲೆಯಲ್ಲಿ ದೊರೆತ ಪ್ರಾಚೀನ ಶಿಲ್ಪಗಳನ್ನು ಸಂಗ್ರಹಿಸಲಾಗಿದೆ.
ರಂಗಯ್ಯನ ಬಾಗಿಲು ಬಳಿಯಿರುವ ದೇವಸ್ಥಾನಗಳು :
1.ಶ್ರೀರಾಮ ದೇವಸ್ಥಾನ:
ರಂಗಯ್ಯನ ಬಾಗಿಲಿನ ಹೊರಗೆ ಬಲಭಾಗದಲ್ಲಿ ಗರ್ಭಗೃಹ ಮಾತ್ರವಿರುವ ಶ್ರೀ ರಾಮ ದೇವಸ್ಥಾನವಿದೆ . ಇದರಲ್ಲಿ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಪೂರ್ವಾಭಿಮುಖವಾಗಿದೆ.
2.ಆಂಜನೇಯಸ್ವಾಮಿ ದೇವಸ್ಥಾನ:
ಬಾಗಿಲಿನ ಹೊರಗೆ ಎಡಭಾಗದಲ್ಲಿ ಇರುವ ಈ ಆಂಜನೇಯಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದೆ.
ಗರ್ಭಗೃಹ ಮಾತ್ರ ಹೊಂದಿರುವ ಈ ದೇವಾಲಯವು ಹಿಂದೆ ಚಿಕ್ಕದಾಗಿದ್ದು , ಕಳೆದ ದಶಕದಲ್ಲಿ ವಿಸ್ತರಿಸಲಾಗಿದೆ.
3..ಮದಕರಿ ಗಣಪತಿ ದೇವಸ್ಥಾನ:
ರಂಗಯ್ಯನ ಬಾಗಿಲ ಎದುರಿಗೆ ಬಲಬದಿಯಲ್ಲಿ ನಿರ್ಮಾಣ ಮಾಡಲಾಗಿರುವ ಮದಕರಿ ಗಣಪತಿ ದೇವಸ್ಥಾನವು 1-2 ದಶಕದಲ್ಲಿ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.ಇದರ ಪಕ್ಕದಲ್ಲಿಯೇ ಹಿಂದೆ ಪ್ರತಿಷ್ಠಾಪಿಸಲಾಗುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ನೆನಪಿಗಾಗಿ ಈ ಮಂದಿರವನ್ನು ನಿರ್ಮಾಣ ಮಾಡಲಾಗಿದೆ . ಗರ್ಭಗೃಹ ಹಾಗೂ ಸಭಾಮಂಟಪಗಳಿದ್ದು, ಗರ್ಭಗೃಹದಲ್ಲಿ ಗಣಪತಿ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರತಿ ತಿಂಗಳು ಸಂಕಷ್ಟ ಚತುರ್ಥಿಯಂದು ನೂರಾರು ಭಕ್ತರಿಂದ ಈ ದೇವಾಲಯವು ತುಂಬಿರುತ್ತದೆ.
4.ಬನ್ನಿಮಹಾಕಾಳಿ ದೇವಸ್ಥಾನ:
ಆಂಜನೇಯಸ್ವಾಮಿ ದೇವಸ್ಥಾನದ ಎದುರು ಇರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಲಾಗಿದೆ.
5.ಉಜ್ಜಯಿನಿ ಮಠ:
ರಂಗಯ್ಯನ ಬಾಗಿಲಿನಿಂದ ಒಳಗೆ ದಕ್ಷಿಣದಲ್ಲಿ ಈ ಮಠವಿದೆ .ಪುರಾತನ ಕಾಲದ ಸ್ಮಾರಕ ಯಾವುದು ಇಲ್ಲಿಲ್ಲದಿದ್ದರೂ ಪಾಳೆಗಾರರ ಕಾಲದಲ್ಲಿ ಇಲ್ಲಿ ಆಗಿದ್ದ ವೀರಶೈವ ಪರಂಪರೆಯ ಮಠಗಳಲ್ಲಿ ಇದು ಒಂದಾಗಿದೆ. ಇದರ ಇತಿಹಾಸ , ಗುರು ಪರಂಪರೆ ಸ್ಪಷ್ಟವಾಗಿ ಉಳಿದು ಬಂದಂತೆ ಕಾಣುವುದಿಲ್ಲ.ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಪೀಠದ ಶಾಖಾ ಮಠವಾಗಿದೆ.
ವಿದ್ಯಾರ್ಥಿಗಳಿಗೆ ಊಟ ವಸತಿಯ ಸೌಲಭ್ಯವಿದೆ.
6.ಉಮಾಮಹೇಶ್ವರ ದೇವಸ್ಥಾನ:
ರಂಗಯ್ಯನ ಬಾಗಿಲಿನಿಂದ ಕರುವಿನಕಟ್ಟೆಗೆ ಹೋಗುವ ದಾರಿಯಲ್ಲಿ ಬಲಭಾಗಕ್ಕೆ ಉಮಾಮಹೇಶ್ವರ ದೇವಾಲಯವಿದ್ದು,ಇದು 17 -18 ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.ಗರ್ಭಗೃಹ,ಅಂತರಾಳ, ಸಭಾಮಂಟಪಗಳಿಂದ ಕೂಡಿದ ದೇವಾಲಯವಿದು.
ಗರ್ಭಗೃಹದಲ್ಲಿ ಎರಡೂವರೆ ಅಡಿ ಎತ್ತರದ ಶಿವಲಿಂಗವಿದೆ. ಅಂತರಾಳದಲ್ಲಿ ಒಂದೂವರೆ ಅಡಿ ಎತ್ತರದ ನಂದಿಯನ್ನು ಶಿವಲಿಂಗಕ್ಕೆ ಎದುರಾಗಿ ಪ್ರತಿಷ್ಠಾಪಿಸಿರುವರು. ಗರ್ಭಗೃಹದ ಬಾಗಿಲುವಾಡದ ಇಕ್ಕೆಲಗಳಲ್ಲಿ ಪೂರ್ಣಕುಂಭ ಮತ್ತು ದ್ವಾರ ಬಂಧದಲ್ಲಿ ಪದ್ಮಗಳಿವೆ.

ಅಂತರಾಳದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರು ಹಾಗೂ ದ್ವಾರಬಂಧದಲ್ಲಿ ಉಬ್ಬುಶಿಲ್ಪಗಳಿವೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳಿದ್ದು, ಅವುಗಳನ್ನು ಬಹುಮುಖಗಳಲ್ಲಿ ಕಡೆಯಲಾಗಿದೆ.ದೇವಾಲಯದ ಹೊರಗೋಡೆಯಲ್ಲಿ ಮೀನಿನ ಹಾಗೂ ನಾಗರಹಾವಿನ ಉಬ್ಬುಶಿಲ್ಪಗಳಿವೆ.
















