ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಪ್ರಥಮ ದರ್ಜೆ ಸಹಾಯಕ (FDA) ಹಾಗೂ ದ್ವಿತೀಯ ದರ್ಜೆ ಸಹಾಯಕ (SDA) ನೇಮಕಾತಿ ಪರೀಕ್ಷೆಗಳ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ‘ಕರ್ನಾಟಕ ನಾಗರಿಕ ಸೇವೆಗಳ ತಿದ್ದುಪಡಿ ನಿಯಮಗಳು-2026’ ಕರಡು ಅಧಿಸೂಚನೆಯನ್ನು ಗ್ಯಾಜೆಟ್‌ನಲ್ಲಿ ಪ್ರಕಟಿಸಿದೆ. ಕರಡು ನಿಯಮದಲ್ಲಿ ಪರೀಕ್ಷಾ ಮಾದರಿ, ಅರ್ಹತೆ ಹಾಗೂ ಅಂಕಗಳ ಕುರಿತು ಹಲವು ಹೊಸ ಮಾನದಂಡಗಳನ್ನು ಪ್ರಸ್ತಾಪಿಸಲಾಗಿದೆ.
ಹೊಸ ಕರಡು ನಿಯಮದ ಪ್ರಕಾರ, ಇನ್ನು ಮುಂದೆ FDA ಮತ್ತು SDA ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಲ್ಲೂ ಋಣಾತ್ಮಕ ಅಂಕಗಳ ವ್ಯವಸ್ಥೆ ಜಾರಿಗೆ ಬರಲಿದೆ. ಅಭ್ಯರ್ಥಿಗಳು ನೀಡುವ ಪ್ರತಿ ತಪ್ಪು ಉತ್ತರಕ್ಕೆ ಆ ಪ್ರಶ್ನೆಗೆ ನಿಗದಿಪಡಿಸಿರುವ ಅಂಕಗಳ 1/4ರಷ್ಟು ಅಂಕ ಕಡಿತವಾಗಲಿದೆ.ಈ ಹಿಂದೆ ನಡೆದ ಹಲವು FDA-SDA ನೇಮಕಾತಿ ಪರೀಕ್ಷೆಗಳಲ್ಲಿ ನೆಗೆಟಿವ್ ಮಾರ್ಕ್ಸ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಹೊಸ ನಿಯಮವು ಪರೀಕ್ಷಾರ್ಥಿಗಳ ಸಿದ್ಧತೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸುವ ತಂತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದರ ಜತೆಗೆ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅಭ್ಯರ್ಥಿಗಳು ಕನಿಷ್ಠ ಶೇ.35ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯ ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.FDA ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯ.SDA ಅಥವಾ ಕಿರಿಯ ಸಹಾಯಕ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಕನಿಷ್ಠ ಅರ್ಹತೆಯಾಗಿರಲಿದೆ.
ಪತ್ರಿಕೆ-1ರ ಪಠ್ಯಕ್ರಮವನ್ನು ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ರೂಪಿಸಲಾಗುತ್ತದೆ. ಪತ್ರಿಕೆ-2ರ ಪಠ್ಯಕ್ರಮವನ್ನು ಆಯಾ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಹಾಗೂ ನೇಮಕಾತಿ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುತ್ತದೆ.ಅಭ್ಯರ್ಥಿಗಳಿಗೆ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಪರೀಕ್ಷಾ ಅವಧಿಯನ್ನು ವಿಸ್ತರಿಸಿರುವುದು. ಈ ಹಿಂದೆ ಪ್ರತಿ ಪತ್ರಿಕೆಗೆ 90 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿತ್ತು. ಹೊಸ ತಿದ್ದುಪಡಿ ನಿಯಮದ ಪ್ರಕಾರ ಪ್ರತಿ ಪತ್ರಿಕೆಗೆ ಎರಡು ಗಂಟೆಗಳ ಕಾಲಾವಕಾಶ ನೀಡಲು ಪ್ರಸ್ತಾಪಿಸಲಾಗಿದೆ.
ಇದರಿಂದ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಉತ್ತರಿಸಲು ಹೆಚ್ಚಿನ ಸಮಯ ದೊರೆಯಲಿದೆ. ಆದರೆ ನೆಗೆಟಿವ್ ಮಾರ್ಕ್ಸ್ ಜಾರಿಯಾಗುತ್ತಿರುವುದರಿಂದ ಉತ್ತರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ.ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ ಬಳಿಕ ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ, ಅವರ ಸ್ಥಾನಕ್ಕೆ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು ಎಂಬ ಷರತ್ತನ್ನೂ ಕರಡು ನಿಯಮದಲ್ಲಿ ಸೇರಿಸಲಾಗಿದೆ.
ಸದ್ಯ ಇದು ಕರಡು ಅಧಿಸೂಚನೆ ಮಾತ್ರವಾಗಿದ್ದು, ಸಾರ್ವಜನಿಕರು ಹಾಗೂ ಸಂಬಂಧಪಟ್ಟವರು ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ನಿಯಮಗಳನ್ನು ಪ್ರಕಟಿಸಲಾಗುತ್ತದೆ.ಹೀಗಾಗಿ FDA-SDA ನೇಮಕಾತಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಅಂತಿಮ ಅಧಿಸೂಚನೆ ಹೊರಬರುವವರೆಗೆ ಅಧಿಕೃತ ಮಾಹಿತಿಯನ್ನು ಗಮನಿಸುವುದು ಅಗತ್ಯವಾಗಿದೆ.









