ಚಿತ್ರದುರ್ಗ. ಅ.15: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ಯಶಸ್ವಿ ನಿರ್ವಹಣೆಗಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಲೋಪಗಳಿಗೆ ಅವಕಾಶವಿಲ್ಲದೆ, ಎಚ್ಚರಿಕೆಯಿಂದ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ಕ್ಕೆ ಸಂಬಂಧಿಸಿದಂತೆ ಪಿಆರ್ಒ, ಎಪಿಆರ್ಒ, ಮತಗಟ್ಟೆ ಅಧಿಕಾರಿಗಳು ಹಾಗೂ ಮೈಕ್ರೋ ಅಬ್ಸರ್ವರ್ಸ್ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಹಂತವೂ ಅತ್ಯಂತ ಮಹತ್ವದ್ದಾಗಿದೆ. ಇದೇ ಅಕ್ಟೋಬರ್ 23ರಂದು ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆಯಿಂದ ಹಿಡಿದು ಮತ ಎಣಿಕೆವರೆಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಯಾವುದೇ ಕೆಲಸ ಮಾಡಬೇಕಾದರೂ ತರಬೇತಿ ಮತ್ತು ಅರಿವು ಮುಖ್ಯ. ಕೆಲಸ ಸುಲಭವಾಗಲಿ ಎಂಬ ಕಾರಣಕ್ಕೆ ಸರಳವಾಗಿರುವ ಪಿ.ಪಿ.ಟಿ ಮೂಲಕ ಮಾಸ್ಟರ್ ತರಬೇತಿದಾರರು ತರಬೇತಿ ನೀಡಲಿದ್ದು, ದಯವಿಟ್ಟು ಅದನ್ನು ಗಮನವಿಟ್ಟು ಕೇಳಿ ಎಂದು ಸಲಹೆ ನೀಡಿದ ಅವರು, ಜೊತೆಗೆ ವೆಬ್ಸೈಟ್ನಲ್ಲಿ ಲಭ್ಯವಿರುವ ಕೈಪಿಡಿಗಳನ್ನು ಡೌನ್ಲೋಡ್ ಮಾಡಿಕೊಂಡು ಓದುವ ಮೂಲಕ ವಿಷಯದ ಸಂಪೂರ್ಣ ಜ್ಞಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಾಶಸ್ತ್ಯ ಮತಗಳ ಮಾದರಿಯಲ್ಲಿ ಮತದಾನ ನಡೆಯುತ್ತದೆ. ಒಬ್ಬ ಮತದಾರ ಎಷ್ಟು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೋ ಅಷ್ಟು ಜನರಿಗೂ ತಮ್ಮ ಪ್ರಾಶಸ್ತ್ಯದ ಅನುಸಾರ 1, 2, 3… ಹೀಗೆ ಆದ್ಯತೆಯ ಮೇರೆಗೆ ಮತ ಚಲಾಯಿಸಬಹುದು. ಆದರೆ, ಸೀರಿಯಲ್ ನಂಬರ್ ‘1′ ಅನ್ನು ಮಾತ್ರ ನಮೂದಿಸಿದರೆ ಆ ಮತಕ್ಕೆ ಮಾನ್ಯತೆ ಇರುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ನಂಬರ್ 1 ಹಾಕಿದರೆ ಆ ಮತಕ್ಕೆ ಯಾವುದೇ ಬೆಲೆ ಇರುವುದಿಲ್ಲ ಎಂದು ತಿಳಿಸಿದರು.
ಮತಪೆಟ್ಟಿಗೆಯನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡುವುದು ಅತ್ಯಂತ ಮುಖ್ಯ. ಚುನಾವಣೆ ಮುಗಿದ ಬಳಿಕ ಮತಪತ್ರಗಳು ಹೊರಗೆ ಬಂದಿರುವ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಿದರ್ಶನಗಳು ಹಿಂದೆ ಕಂಡುಬಂದಿವೆ. ಇಂತಹ ಅಚಾತುರ್ಯಗಳು ಮರುಕಳಿಸದಂತೆ ಮೂರನೇ ಮತಗಟ್ಟೆ ಅಧಿಕಾರಿ ಮತ್ತು ಪಿ.ಆರ್.ಒ ಮತಪತ್ರದ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕು. ಚುನಾವಣಾ ಆಯೋಗ ನೀಡಿರುವ ಅಧಿಕೃತ ಪೆನ್ನನ್ನು ಮಾತ್ರವೇ ಮತದಾನಕ್ಕೆ ಬಳಸಬೇಕು. ಮತಗಟ್ಟೆಯ ಸಿಬ್ಬಂದಿ ಪ್ರತಿಯೊಬ್ಬ ಮತದಾರರ ಗುರುತನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ಡಯಟ್ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕರು ಹಾಗೂ ಮಾಸ್ಟರ್ ತರಬೇತುದಾರ ಎಸ್.ನಾಗಭೂಷಣ್ ಅವರು ಆಗ್ನೇಯ ಪದವೀಧರರ ಚುನಾವಣಾ ಸಂಬಂಧ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಚಿತ್ರದುರ್ಗ ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್ ಸೇರಿದಂತೆ ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್ಸ್ಗಳು ಇದ್ದರು.











