Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಬೆಂಗಳೂರಿನ ದೊಡ್ಡ ಬಸವಣ್ಣ ದೇವಾಲಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಬೆಂಗಳೂರು ಐತಿಹಾಸಿಕ ಹಾಗೂ ಪ್ರಾಚೀನ ಶಾಸನೊಕ್ತ ಸ್ಥಳವಾಗಿದ್ದು ಇಂದು ಜಾಗತಿಕವಾಗಿ ಎಷ್ಟೇ ಪ್ರಸಿದ್ಧಿ ಪಡೆದಿದ್ದರೂ ಹಿಂದಿನಿಂದಲೂ ಇದೊಂದು ಧಾರ್ಮಿಕ ಕೇಂದ್ರವಾಗಿದ್ದು ನೂರಾರು ದೇವಾಲಯಗಳ ತಾಣವಾಗಿದೆ.
ಬೆಂಗಳೂರಿನ ಪ್ರಮುಖ ಬಡಾವಣೆಯಾದ ಬಸವನಗುಡಿಯಲ್ಲಿರುವ ದೊಡ್ಡ ಬಸವಣ್ಣ ದೇವಾಲಯವು ಬೆಂಗಳೂರಿನ ಒಂದು ಸಿಗ್ನೇಚರ್ ಐಕಾನ್ ಸ್ಥಳವಾಗಿದೆ.

 

ದೊಡ್ಡ ಬಸವಣ್ಣ ದೇವಾಲಯವು ವಿಜಯನಗರ ಕಾಲದ 15-16 ನೇ ಶತಮಾನದ ಒಂದು ಪ್ರಮುಖ ದೇವಾಲಯವಾಗಿದ್ದು ಸಣ್ಣ ಮರಡಿಯ ಮೇಲೆ ನಿರ್ಮಾಣಗೊಂಡಿದೆ. ನೆಲಭಾಗದಿಂದ ಮೇಲ್ಭಾಗಕ್ಕೆ ತಲುಪಲು ಉತ್ತಮವಾದ ಮೆಟ್ಟಿಲುಗಳ ವ್ಯವಸ್ಥೆ ಇದ್ದು, ಅಕ್ಕ ಪಕ್ಕದಲ್ಲಿ ಗ್ರಾಮಾಂತರ ಚಿತ್ರಣದ ಕಲಾಕೃತಿಗಳು ಹಾಗೂ ಎದುರು ಭಾಗದಲ್ಲಿಯೇ ಒಂದು ಸಣ್ಣ ಉದ್ಯಾನವನ ಮಕ್ಕಳ ಆಟಿಕೆ ಸ್ಥಳವನ್ನು ಕಾಣಬಹುದು. ಹಿಂದೆ ಇದೊಂದು ಬೆಟ್ಟ ಗುಡ್ಡಗಳಿಂದ ಒಂದು ಕಾಡು ನಿರ್ಜನ ಪ್ರದೇಶವಾಗಿತ್ತು. 60-70 ರ ದಶಕದ ತನಕವೂ ಇಲ್ಲಿ ಜನಜಂಗುಳಿ ಅಷ್ಟಾಗಿ ಕಂಡು ಬರುತ್ತಿರಲಿಲ್ಲ.
ಈ ದೇವಾಲಯ ಗರ್ಭಗೃಹ ಹಾಗೂ ಮುಖಮಂಟಪವನ್ನು ಒಳಗೊಂಡಿದೆ.
ಗರ್ಭಗೃಹದಲ್ಲಿ 5 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲ ಇರುವ ಗ್ರಾನೆಟ್ ಕಣಶಿಲೆಯ ಸುಂದರವಾದ ಕುಳಿತ ಭಂಗಿಯ ನಂದಿಯನ್ನು ಕೆತ್ತಲಾಗಿದ್ದು ಆಭರಣಗಳಿಂದ ಅಲಂಕೃತಗೊಳಿಸಲಾಗಿದೆ. ದೇವಾಲಯದ ಮುಂಭಾಗದ ಮಂಟಪದ ಮೇಲೆ ದೇವತೆಯರ ಗಾರೆ ಚಿತ್ರಗಳನ್ನು ಹೊಂದಿರುವ ಗಾರೆ ಗೂಡುಗಳ ಸಾಲುಗಳಿವೆ. ಮುಂಭಾಗದ ಕಲ್ಲುಗಳ ಮೇಲೆ ರೇಖಾಚಿತ್ರಗಳಿವೆ. ಬಸವಣ್ಣನ ವಿಗ್ರಹದ ಹಿಂದೆ ಕಲ್ಲಿನ ಗರ್ಭಗೃಹವಿದ್ದು ಇದರ ಶಿವಲಿಂಗವಿದೆ. ದೇವಾಲಯದ ಎದುರು ಭಾಗದಲ್ಲಿ 45 ಅಡಿ ಎತ್ತರದ ದೀಪಸ್ತಂಭವಿದೆ.

 

ಇತಿಹಾಸ:
ಹಿಂದೆ ಇದು ಸುಂಕೇನಹಳ್ಳಿ ಹೆಸರಿನ ದೊಡ್ಡ ಗ್ರಾಮವಾಗಿತ್ತು. ಅಪಾರ ಸಂಖ್ಯೆಯ ರೈತರು ಈ ಪ್ರದೇಶದಲ್ಲಿ ಕಡಲೆಕಾಯಿಯನ್ನು ಬೆಳೆಯಾಗಿ ಬೆಳೆಯುತ್ತಿದ್ದರು. ಆದರೆ ಈ ಪ್ರದೇಶದಲ್ಲಿ ಒಂದು ದೊಡ್ಡ ಬಸವ (ದನ ) ರಾತ್ರಿಯ ಸಮಯದಲ್ಲಿ ಬಂದು ರೈತರ ಬೆಳೆಯನ್ನು ಹಾಳು ಮಾಡುತ್ತಿತ್ತು. ಆದರೆ ಬೆಳೆ ಹಾಳು ಮಾಡುತ್ತಿದ್ದ ಬಸವ ಹಗಲಿನ ಸಮಯದಲ್ಲಿ ಗೋಚರವಾಗುತ್ತಿರಲಿಲ್ಲ. ಕೊನೆಗೆ ಒಂದು ದಿನ ರೈತರೆಲ್ಲರೂ ಈ ದಿನ ರಾತ್ರಿ ದನವನ್ನು ನಾವು ಹಿಡಿಯಲೇ ಬೇಕೆಂದು ಪಣ ತೊಟ್ಟು ಕಾವಲು ಕಾಯುತ್ತಿರುತ್ತಾರೆ ಆಗ ಕೈಲಾಸದಿಂದಲೇ ಶಿವನ ವಾಹನ ನಂದಿಯು ಇವರ ಬೆಳೆಯನ್ನು ತಿನ್ನುತ್ತಿರುವುದನ್ನು ಗಮನಿಸುತ್ತಾರೆ. ಕಡೆಗೆ ಆ ಬಸವನ ಬಳಿ ತೆರಳಿದ ರೈತರು ‘ ದೇವರ ರೂಪವಾದ ನಂದಿಯೇ ನಮ್ಮ ಅನ್ನದ ಬಟ್ಟಲಿಗೆ ಕೈ ಹಾಕಬೇಡ, ನಮ್ಮ ಬೆಳೆಯನ್ನು ತುಳಿದು, ತಿಂದು ಹಾಳು ಮಾಡಬೇಡ. ಇನ್ನು ಮುಂದೆ ನಾವೆಲ್ಲರೂ ಬೆಳೆದ ಮೊದಲ ಬೆಳೆಯ ಕಡ್ಲೆ ಕಾಯಿಯನ್ನು ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಜಾತ್ರೆ ಮಾಡಿ ತಂದು ನಿನ್ನ ಹೆಸರಿಗೆ ಅರ್ಪಿಸಿ ಕಡಲೆಕಾಯಿ ಪರಿಷೆ ಮಾಡುತ್ತೇವೆ’ ಎಂದು ಪೂಜಿಸಿ ಬೇಡಿಕೊಳ್ಳುತ್ತಾರೆ. ಅವರ ಬೇಡಿಕೆಗೆ ಮಣಿದ ಬಸವನು ಅಲ್ಲಿಂದ ಮರೆಯಾಗುತ್ತದೆ. ಅಂದಿನಿಂದ ಅವರು ಬೆಳೆದ ಬೆಳೆಯು ಹಾಳಾಗುವುದಿಲ್ಲ,
ಜೊತೆಗೆ ರೈತರೆಲ್ಲರೂ ಕಡಲೆಕಾಯಿ ಪರಿಸೆ ಮಾಡಲು ಶುರು ಮಾಡಿಕೊಳ್ಳುತ್ತಾರೆ ಎಂಬ ಐತಿಹ್ಯವಿದೆ.

 

ಕಡಲೆಕಾಯಿ ಪರಿಷೆ :
ನಗರೀಕರಣದ ವ್ಯಾಪಕ ಪ್ರಭಾವಕ್ಕೆ ಒಳಗಾಗಿರುವ ಬೆಂಗಳೂರಿನಲ್ಲಿ ಇಂದಿಗೂ ಗ್ರಾಮಾಂತರ ಚಿತ್ರಣ ನೋಡಬೇಕೆಂದರೆ ಪ್ರತಿವರ್ಷದ ಡಿಸೆಂಬರ್ ನಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಬರಬೇಕು. ಲಕ್ಷಾಂತರ ಭಕ್ತರು ಜನರು ಬರುವ ಈ ಜಾತ್ರೆಗೆ ಕಡಲೆಕಾಯಿ ಮಾರಾಟಗಾರರು ನೂರಾರು ಲೆಕ್ಕದಲ್ಲಿ ಆಗಮಿಸುತ್ತಾರೆ. ಹತ್ತಾರು ಊರು ತಾಲೂಕು ಜಿಲ್ಲೆಗಳಲ್ಲಿ ಬೆಳೆದ ಕಡಲೆಕಾಯಿ ಬೆಳೆಯನ್ನು ತಂದು ಜನರು ಇಲ್ಲಿಗೆ ಅರ್ಪಿಸುತ್ತಾರೆ.ಇಂದಿಗೂ ನಮ್ಮ ಮೂಲ ಸಂಸ್ಕೃತಿಯನ್ನು ಕಾಣಬಹುದು. ಗ್ರಾಮೀಣ ಸೊಗಡಿನ ನೋಡಬೇಕೆಂದರೆ ಈ ಪರಿಷೆಗೆ ಬರಬೇಕು.ಬೆಂಗಳೂರಿನ ಜೀವ ಸೆಳೆಯಾಗಿದ್ದ ವೃಷಭಾವತಿ ನದಿಯು ಈ ನಂದಿಯ ಬಲಗಾಲಿನ ಪಾದದ ಬಳಿಯಲ್ಲಿ ಉಗಮವಾಗುತ್ತಿರುವುದು ಇತಿಹಾಸ ತಜ್ಞರು ಗುರುತಿಸಿದ್ದಾರೆ. ಇದರ ಬಳಿಯ ಶಾಸನದಲ್ಲಿ ಇದರ ಉಲ್ಲೇಖವಿದೆ. ಪ್ರತಿ ಸೋಮವಾರ,ಸಂಕ್ರಾಂತಿ, ಶಿವರಾತ್ರಿ,ಯುಗಾದಿ ಹಬ್ಬಗಳನ್ನು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ದಕ್ಷಿಣ ಭಾರತದಲ್ಲಿರುವ ನಾಲ್ಕು ಏಕಶಿಲಾ ನಂದಿ ವಿಗ್ರಹಗಳಲ್ಲಿ ಇದು ಎರಡನೇ ಅತಿ ಎತ್ತರದ ನಂದಿ ವಿಗ್ರಹವಾಗಿದೆ. ಬೆಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಪ್ರಮುಖವಾಗಿದ್ದು ಎಲ್ಲಾ ಸರ್ಕಾರಿ ಖಾಸಗಿ ವಾಹನಗಳು ಈ ಪ್ರದೇಶಕ್ಕೆ ಸಾರಿಗೆ ಸೌಲಭ್ಯ ಒದಗಿಸುತ್ತದೆ.
ಬೆಂಗಳೂರು ನಗರ ಪ್ರವಾಸಿ ತಾಣಗಳಿಗೆ ಭೇಟಿ ನೀಡ ಬಯಸುವವರು ಇಲ್ಲಿಗೆ ತಪ್ಪದೇ ಬರುತ್ತಾರೆ . ದೇವಾಲಯವು ಬೆಳಿಗ್ಗೆ ಇಂದ ರಾತ್ರಿ ತನಕ ತೆರೆದಿರುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...