ಸುದ್ದಿಒನ್,ನವದೆಹಲಿ,ಮೇ.15: ಕಳೆದ ಬಾರಿ ನಡೆದ ನೀಟ್ (NEET-UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದ ಬೆನ್ನಲ್ಲೇ, ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಆನ್ಲೈನ್ (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಮೂಲಕ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಇನ್ನು ಮುಂದೆ ಸಾಂಪ್ರದಾಯಿಕ ಒಎಂಆರ್ (OMR) ಶೀಟ್ಗಳ ಬದಲಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದೆ. ಇದು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಮೂಲಭೂತ ಸಮಸ್ಯೆಗಳನ್ನು ಹೋಗಲಾಡಿಸಲು ನೆರವಾಗಲಿದೆ ಎಂದರು.

ಪ್ರಸ್ತುತ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗಾಗಿ ಹೊಸ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಇಂದಿನಿಂದ ಒಂದು ತಿಂಗಳ ನಂತರ ಮರು ಪರೀಕ್ಷೆ ನಡೆಯಲಿದೆ.ಪರೀಕ್ಷಾ ಅಕ್ರಮದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರವು ತಕ್ಷಣವೇ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ತನಿಖಾ ಸಂಸ್ಥೆಗಳ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಚಿತ ಎಂದು ಸಚಿವರು ಎಚ್ಚರಿಸಿದ್ದಾರೆ.
ನಮ್ಮ ಗುರಿ ಭ್ರಷ್ಟಾಚಾರ ಮುಕ್ತ ಪರೀಕ್ಷೆ ನಡೆಸುವುದು. ಪರೀಕ್ಷಾ ಮಾಫಿಯಾ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಇದು ಸುದೀರ್ಘ ಹೋರಾಟವಾಗಿದೆ. ತಂತ್ರಜ್ಞಾನದ ಯುಗದಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು ಎಂದರು.
ಪರೀಕ್ಷಾ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸುವ ಅಥವಾ ಭೀತಿ ಹುಟ್ಟಿಸುವ ಪ್ರಯತ್ನ ಮಾಡುವವರ ವಿರುದ್ಧ ಸರ್ಕಾರ ಕಠಿಣ ನಿಲುವು ತಳೆದಿದೆ. “ಪರೀಕ್ಷಾ ಪ್ರಕ್ರಿಯೆಯಿಂದ ದೂರವಿರಿ, ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಸಚಿವರು ಪರೀಕ್ಷಾ ಮಾಫಿಯಾಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಮುಂದಿನ ವರ್ಷದಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದ್ದು, ವಿದ್ಯಾರ್ಥಿಗಳ ಹಿತರಕ್ಷಣೆ ಸಾಧ್ಯವಾಗಲಿದೆ ಎಂದು ಸರ್ಕಾರ ಆಶಿಸಿದೆ.


















