ಸುದ್ದಿಒನ್, ಚಿತ್ರದುರ್ಗ, ಮೇ. 15 : “ಕೇವಲ 30 ವಿದ್ಯಾರ್ಥಿನಿಯರಿಂದ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಂದು 700ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಈ ಭಾಗದ ಹೆಣ್ಣುಮಕ್ಕಳ ಶಿಕ್ಷಣದ ಪ್ರಗತಿಗಾಗಿ ಕಾಲೇಜಿಗೆ ಶೀಘ್ರದಲ್ಲೇ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸಲು ನಾನು ಬದ್ಧನಾಗಿದ್ದೇನೆ,” ಎಂದು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ಸಿ. ವೀರೇಂದ್ರ (ಪಪ್ಪಿ) ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಪ್ರತಿಭೋತ್ಸವ-2026’ ಹಾಗೂ ‘ಮಹಿಳಾಸಿರಿ’ ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಮಹಿಳಾಸಿರಿ’ ಅನ್ನು ಬಿಡುಗಡೆಗೊಳಿಸಿ, ಮಾತನಾಡಿದ ಚಿತ್ರದುರ್ಗದ ಶಾಸಕರಾದ ವೀರೇಂದ್ರ ಪಪ್ಪಿ ಅವರು ಕಾಲೇಜಿನ ಶೈಕ್ಷಣಿಕ ಬೆಳವಣಿಗೆಯನ್ನು ಶ್ಲಾಘಿಸಿದ ಅವರು, ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಶಿವಣ್ಣ ಅವರು “2013-14ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಆರಂಭವಾಯಿತು. ಪ್ರಸ್ತುತ 12 ಕಾಯಂ ಬೋಧಕರು, 15 ಅತಿಥಿ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಾಲೇಜು ಮಾದರಿಯಾಗಿ ಬೆಳೆಯುತ್ತಿದೆ. ಆದರೆ ಸ್ವಂತ ಕಟ್ಟಡದ ಅವಶ್ಯಕತೆ ತುರ್ತಾಗಿದ್ದು, ಜನಪ್ರತಿನಿಧಿಗಳ ಸಹಕಾರ ಅತಿ ಅಗತ್ಯವಿದೆ,” ಎಂದು ಸಭೆಯ ಗಮನ ಸೆಳೆದರು.

ಕಾರ್ಯಕ್ರಮದ ಸಮಾರೋಪ ನುಡಿಗಳನ್ನು ಆಡಿದ ಶರಣಪ್ಪ ಎಸ್. ಜನಪದ ತಜ್ಞರು, ಹಿರೇಕೊಗಲೂರು ಇವರು ಬದುಕಿನ ಮೌಲ್ಯವನ್ನು ಹೇಳುವ ಜನಪದ ಸಾಹಿತ್ಯ ನಮಗೆ ಮಾದರಿಯಾಗಬೇಕು ಎಂದರು. ಇದೇ ಸಂಧರ್ಭದಲ್ಲಿ ಬಿಎ, ಬಿಕಾಂ ಪ್ರಥಮ, ದ್ವಿತೀಯ, ತೃತೀಯ ವರ್ಷದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್ ಎಸ್, ರೇಂಜರ್ಸ್ ಘಟಕಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯವಿಭಾಗದ ಪ್ರೊ.ಜಯಲಕ್ಷ್ಮಮ್ಮ ಕೆ., ಕನ್ನಡ ವಿಭಾಗದ ಡಾ. ಗಾಯಿತ್ರಮ್ಮ, ಐಕ್ಯೂಎಸಿ ಸಂಚಾಲಕರಾದ ಶ್ರೀ ಹಲಸಂದಿ ಸತೀಶ್, ವಾಣಿಜ್ಯಶಾಸ್ತ್ರದ ಕನಕರಾಜು, ಗಿರೀಶ್ ಎಂ., ಗ್ರಂಥಪಾಲಕರಾದ ಕುಮಾರಸ್ವಾಮಿ ಬಿ.ಎಚ್., ದೈಹಿಕಶಿಕ್ಷಣ ನಿರ್ದೇಶಕರಾದ ಶಿವಪ್ರಸಾದ್ ಆರ್, ಪತ್ರಾಂಕಿತ ವ್ಯವಸ್ಥಾಪಕರಾದ ವೆಂಕಟೇಶ್ ಆರ್., ಉಪನ್ಯಾಸಕರಾದ ಡಾ. ನಂದಿನಿ ಟಿ. ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಐನೂರಕ್ಕೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


















