ಬೆಂಗಳೂರು : ನಗರದಲ್ಲಿ ಸಾರ್ವಜನಿಕ ವಾಹನಗಳಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ರಸ್ತೆಗಳಲ್ಲಿ ಕಬ್ಬಿಣದ ಮೊಳೆಗಳನ್ನು ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದು, ಕಚೇರಿ ಕೆಲಸ, ವ್ಯಾಪಾರ, ತುರ್ತು ಸೇವೆಗಳು ಹಾಗೂ ಸಾರ್ವಜನಿಕ ಸಂಚಾರದ ಮೇಲೆ ಈ ಕೃತ್ಯಗಳಿಂದ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೆಲವು ಪಂಕ್ಚರ್ ಅಂಗಡಿ ಮಾಲೀಕರು ಹಾಗೂ ಕಿಡಿಗೇಡಿಗಳು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಪ್ರಮುಖ ರಸ್ತೆಗಳು, ಫ್ಲೈಓವರ್ಗಳು, ಸುರಂಗ ಮಾರ್ಗಗಳು ಸೇರಿದಂತೆ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ಕಬ್ಬಿಣದ ಮೊಳೆಗಳನ್ನು ಹರಡಿ ವಾಹನಗಳನ್ನು ಪಂಕ್ಚರ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಾಹನಗಳು ಪಂಕ್ಚರ್ ಆದ ಬಳಿಕ ಸಾರ್ವಜನಿಕರಿಂದ ಅಧಿಕ ಹಣ ವಸೂಲಿ ಮಾಡಿ ಸುಲಿಗೆ ನಡೆಸಲಾಗುತ್ತಿದೆ. ಈ ರೀತಿಯ ಕೃತ್ಯಗಳಿಂದ ವಾಹನ ಅಪಘಾತಗಳ ಸಾಧ್ಯತೆಯೂ ಹೆಚ್ಚುತ್ತಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.ವಿಶೇಷವಾಗಿ ಆಂಬುಲೆನ್ಸ್, ಅಗ್ನಿಶಾಮಕ ವಾಹನ ಹಾಗೂ ಪೊಲೀಸ್ ತುರ್ತು ಸೇವಾ ವಾಹನಗಳು ಮಧ್ಯದಲ್ಲೇ ಸ್ಥಗಿತಗೊಂಡರೆ ಜೀವಹಾನಿ ಸಂಭವಿಸುವ ಅಪಾಯವಿದೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬವಾಗಿ ದುರ್ಘಟನೆಗಳು ಸಂಭವಿಸಬಹುದೆಂದು ಎಚ್ಚರಿಸಲಾಗಿದೆ.
ಇದೇ ವೇಳೆ ಶಾಲೆ, ಕಾಲೇಜು, ಕಚೇರಿ ಹಾಗೂ ಉದ್ಯೋಗ ಸಂಬಂಧಿತ ಪ್ರಯಾಣ ಮಾಡುವ ಸಾರ್ವಜನಿಕರು ಸಮಯಕ್ಕೆ ಗಮ್ಯಸ್ಥಾನ ತಲುಪಲು ಸಾಧ್ಯವಾಗದೇ ಮಾನಸಿಕ ಒತ್ತಡ ಮತ್ತು ಅನಗತ್ಯ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಗರದ ಹಲವು ಭಾಗಗಳಲ್ಲಿ ಸಾರ್ವಜನಿಕರು ಸ್ವಯಂ ಕಾರ್ಯಾಚರಣೆ ನಡೆಸಿ ಮೊಳೆಗಳನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲೂ ‘ಮೊಳೆ ಮಾಫಿಯಾ’ ಕುರಿತ ವರದಿಗಳು ಪ್ರಸಾರವಾಗುತ್ತಿವೆ.
ಕೆಲವು ಪೊಲೀಸ್ ಠಾಣೆಗಳ ಸಮೀಪದಲ್ಲಿಯೇ ಇಂತಹ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿರುವ ಆರೋಪವೂ ಕೇಳಿಬಂದಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.ಜೊತೆಗೆ ನಗರ ವ್ಯಾಪ್ತಿಯ ಎಲ್ಲಾ ಪಂಕ್ಚರ್ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ, ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಆಯುಕ್ತರಿಗೆ ಪತ್ರದಲ್ಲಿ ಒತ್ತಾಯಿಸಲಾಗಿದೆ.











