ಸುದ್ದಿಒನ್, ಮೈಸೂರು, ಮೇ.07 : ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಅತೀ ಶೀಘ್ರದಲ್ಲೇ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಬುಧವಾರ ಮೈಸೂರಿನ ಕಲಾಮಂದಿರದಲ್ಲಿ ನಡೆದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲಾ ಸಮುದಾಯಗಳ ಒಮ್ಮತದ ಮೇರೆಗೆ ಒಳಮೀಸಲಾತಿಯನ್ನು ಹಂಚಿಕೆ ಮಾಡಲಾಗುವುದು. ಈ ವಿಚಾರದಲ್ಲಿ ಸರ್ಕಾರ ಈಗಾಗಲೇ ಗಣನೀಯ ಪ್ರಗತಿ ಸಾಧಿಸಿದ್ದು, ಸಚಿವ ಸಂಪುಟದ ಎಲ್ಲಾ ಸದಸ್ಯರು ಇದಕ್ಕೆ ಒಮ್ಮತ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಜಾತಿ ಗಣತಿ ವರದಿ ಬಂದ ನಂತರ ಈ ಕುರಿತು ಮತ್ತೊಮ್ಮೆ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು ಹಾಗೂ ರಾಜ್ಯದ ಸರ್ವರಿಗೂ ಸಮಪಾಲು-ಸಮಬಾಳು ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಶೋಷಿತ ವರ್ಗಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.













