ಬೆಂಗಳೂರು. ಆಗಸ್ಟ್.10 : ಭಾರತವು ಆಗಸ್ಟ್ 15, 2026 ರಂದು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳು ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಈ ರಾಷ್ಟ್ರವ್ಯಾಪಿ ಅಭಿಯಾನವು ಆಗಸ್ಟ್ 9 ರಿಂದ 17 ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಉತ್ತೇಜಿಸಲಾಗುತ್ತಿದೆ.
‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿ ಆರಂಭವಾದ ಈ ಅಭಿಯಾನವನ್ನು ಈ ಬಾರಿ ರಾಷ್ಟ್ರಗೀತೆ ‘ವಂದೇ ಮಾತರಂ’ ರಚನೆಯ 150ನೇ ವರ್ಷದ ಸವಿನೆನಪಿಗೆ ಸಮರ್ಪಿಸಲಾಗಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ತಿರಂಗಾ ಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರ‍್ಯಾಲಿಗಳನ್ನು ಆಯೋಜಿಸಲಾಗುತ್ತಿದ್ದು, ಇದಕ್ಕೆ ‘ಸೂರ್ಯಪಥ ತಿರಂಗಾ’ ಎಂದು ಹೆಸರಿಡಲಾಗಿದೆ.
ರಾಷ್ಟ್ರಧ್ವಜ ಹಾರಿಸುವ ಮತ್ತು ತೆರವುಗೊಳಿಸುವ ಪ್ರಮುಖ 10 ನಿಯಮಗಳು
ಗೌರವ ಸಲ್ಲಿಸಿ: ಮನೆ, ಕಚೇರಿ ಅಥವಾ ಶಾಲೆಯಲ್ಲಿ ಧ್ವಜ ಹಾರಿಸುವಾಗ ಅದರ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ.
ಹಾಳಾದ ಧ್ವಜ ಬಳಸಬೇಡಿ: ಹರಿದ ಅಥವಾ ಕೊಳಕಾದ ಧ್ವಜವನ್ನು ಹಾರಿಸುವುದು ಅಪರಾಧ. ಯಾವಾಗಲೂ ಸ್ವಚ್ಛ ಧ್ವಜವನ್ನೇ ಬಳಸಿ.
ನೆಲ ಅಥವಾ ನೀರಿಗೆ ತಾಕಬಾರದು: ಧ್ವಜವು ನೆಲವನ್ನು ಸ್ಪರ್ಶಿಸಬಾರದು ಮತ್ತು ಮಳೆನೀರಿನಲ್ಲಿ ನೆನೆಯಬಾರದು.
ಸರಿಯಾದ ಬಟ್ಟೆ ಆಯ್ಕೆ: ಕಾಟನ್, ಪಾಲಿಯೆಸ್ಟರ್, ಉಣ್ಣೆ, ಸಿಲ್ಕ್ ಅಥವಾ ಖಾದಿ ಬಟ್ಟೆಯ ಧ್ವಜ ಬಳಸಬಹುದು. ಇದನ್ನು ಉಡುಪಾಗಿ ಅಥವಾ ಅಲಂಕಾರಕ್ಕೆ ಬಳಸಬಾರದು.
ನಿರ್ದಿಷ್ಟ ಅಳತೆ: ರಾಷ್ಟ್ರಧ್ವಜವು ಆಯತಾಕಾರದಲ್ಲಿರಬೇಕು ಮತ್ತು ಅದರ ಉದ್ದ ಹಾಗೂ ಎತ್ತರದ (ಅಗಲ) ಅನುಪಾತ 3:2 ಇರಬೇಕು.
ಹಗಲು-ರಾತ್ರಿ ಹಾರಿಸಲು ಅವಕಾಶ: ನಿಯಮಗಳ ತಿದ್ದುಪಡಿಯ ನಂತರ ಈಗ ರಾತ್ರಿಯಲ್ಲೂ ಧ್ವಜ ಹಾರಿಸಬಹುದು. ಆದರೆ ರಾತ್ರಿ ವೇಳೆಯಲ್ಲಿ ಧ್ವಜದ ಮೇಲೆ ಬೆಳಕು ಬೀಳುವಂತೆ ಬೆಳಕಿನ ವ್ಯವಸ್ಥೆ ಇರಬೇಕು.
ಅಶೋಕ ಚಕ್ರ ಸ್ಪಷ್ಟವಾಗಿರಲಿ: ಗಾಳಿ ಬೀಸಿದಾಗ ಅಶೋಕ ಚಕ್ರವು ಸ್ಪಷ್ಟವಾಗಿ ಕಾಣಿಸುವಂತೆ ಧ್ವಜವನ್ನು ಕಟ್ಟಬೇಕು.
ಇತರ ಧ್ವಜಗಳಿಗಿಂತ ಎತ್ತರದಲ್ಲಿರಲಿ: ರಾಷ್ಟ್ರಧ್ವಜದ ಜೊತೆಗೆ ಬೇರೆ ಯಾವುದೇ ಧ್ವಜವನ್ನು ಒಂದೇ ಕಂಬದಲ್ಲಿ ಅಥವಾ ಅದಕ್ಕಿಂತ ಎತ್ತರದಲ್ಲಿ ಹಾರಿಸಬಾರದು.
ಬಣ್ಣಗಳ ಕ್ರಮ: ಕೇಸರಿ ಬಣ್ಣವು ಯಾವಾಗಲೂ ಮೇಲ್ಭಾಗದಲ್ಲಿರಬೇಕು. ಧ್ವಜವನ್ನು ತಲೆಕೆಳಗಾಗಿ ಹಾರಿಸಬಾರದು.
ಗೌರವಪೂರ್ವಕವಾಗಿ ಹಿಂತೆಗೆಯಿರಿ: ಅಭಿಯಾನ ಮುಗಿದ ನಂತರ ಧ್ವಜವನ್ನು ಗೌರವದಿಂದ ಕೆಳಗಿಳಿಸಿ, ಸರಿಯಾಗಿ ಮಡಚಿ ಸುರಕ್ಷಿತವಾಗಿಡಬೇಕು.
ಎಚ್ಚರಿಕೆ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ಅಥವಾ ಫ್ಲ್ಯಾಗ್ ಕೋಡ್ ಉಲ್ಲಂಘಿಸುವುದು Prevention of Insults to National Honour Act, 1971 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ನಿಯಮ ಉಲ್ಲಂಘಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು.
ಸರ್ಟಿಫಿಕೇಟ್ ಪಡೆಯುವುದು ಹೇಗೆ?

ಆಗಸ್ಟ್ 9 ರಿಂದ 17 ರ ನಡುವೆ ನಿಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ.
ಧ್ವಜದೊಂದಿಗೆ ನಿಮ್ಮ ಒಂದು ಸೆಲ್ಫಿ ಅಥವಾ ಫೋಟೋ ತೆಗೆದುಕೊಳ್ಳಿ.
ಅಧಿಕೃತ ವೆಬ್‌ಸೈಟ್ harghartiranga.com ಗೆ ಭೇಟಿ ನೀಡಿ.
ನಿಮ್ಮ ವಿವರಗಳನ್ನು ನಮೂದಿಸಿ, ಫೋಟೋವನ್ನು ಅಪ್‌ಲೋಡ್ ಮಾಡಿ.
ತಕ್ಷಣವೇ ನಿಮ್ಮ ಅಧಿಕೃತ ಸರ್ಟಿಫಿಕೇಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಈ ಸರ್ಟಿಫಿಕೇಟ್ ಅನ್ನು #HarGharTiranga ಮತ್ತು #HGT2026 ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ.












