ಅಡುಗೆಮನೆಯಲ್ಲಿ ಮಾಡುವ ಸಣ್ಣ ಅಜಾಗರೂಕತೆಯೂ ಕೆಲವೊಮ್ಮೆ ದೊಡ್ಡ ಅಗ್ನಿ ಅವಘಡಕ್ಕೆ ಕಾರಣವಾಗಬಹುದು. ವಿಶೇಷವಾಗಿ ಗ್ಯಾಸ್ ಸ್ಟವ್ ಸುತ್ತಮುತ್ತ ಬೇಗನೆ ಬೆಂಕಿ ಹೊತ್ತಿಕೊಳ್ಳುವ ಅಥವಾ ಶಾಖಕ್ಕೆ ಕರಗುವ ವಸ್ತುಗಳನ್ನು ಇಡುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಗ್ಯಾಸ್ ಸ್ಟವ್ ಪಕ್ಕದಲ್ಲಿ ಇಡಬಾರದ5 ಮುಖ್ಯ ವಸ್ತುಗಳು ಇಲ್ಲಿವೆ.
ಗ್ಯಾಸ್ ಸ್ಟವ್ ಪಕ್ಕದಲ್ಲಿ ಇಡಬಾರದಿರುವ 5 ವಸ್ತುಗಳು
ಪ್ಲಾಸ್ಟಿಕ್ ಪಾತ್ರೆಗಳು ಮತ್ತು ಬಾಟಲಿಗಳು: ಸಕ್ಕರೆ, ಟೀ ಪುಡಿ, ಖಾರದ ಪುಡಿ ಇಟ್ಟಿರುವ ಪ್ಲಾಸ್ಟಿಕ್ ಡಬ್ಬಿಗಳನ್ನು ಸ್ಟವ್ ಪಕ್ಕದಲ್ಲೇ ಇಡುವುದು ಸಾಮಾನ್ಯ. ಆದರೆ ಸ್ಟವ್ನ ಶಾಖಕ್ಕೆ ಪ್ಲಾಸ್ಟಿಕ್ ಕರಗಿ, ಅದರಿಂದ ಹಾನಿಕಾರಕ ಹೊಗೆ ಹೊರಬರಬಹುದು.

ಅಡುಗೆ ಎಣ್ಣೆ, ತುಪ್ಪ ಮತ್ತು ಆಯಿಲ್ ಸ್ಪೇಗಳು: ಬಳಸಲು ಸುಲಭವಾಗಲಿ ಎಂದು ಎಣ್ಣೆ-ತುಪ್ಪದ ಪಾತ್ರೆಗಳನ್ನು ಪಕ್ಕದಲ್ಲೇ ಇಡಬೇಡಿ. ಅಧಿಕ ಶಾಖದಿಂದ ಎಣ್ಣೆ ಕಾಯ್ದು ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ. ಅದರಲ್ಲೂ ಏರೋಸಾಲ್ ಆಯಿಲ್ ಸ್ಪ್ರೇ ಕ್ಯಾನ್ಗಳನ್ನು ಶಾಖದಿಂದ ಸದಾ ದೂರವಿಡಬೇಕು.
ಪೇಪರ್, ಟಿಶ್ಯೂ ಮತ್ತು ಕಿಚನ್ ಟವೆಲ್ಗಳು: ಟಿಶ್ಯೂ ಪೇಪರ್, ನ್ಯೂಸ್ಪೇಪರ್ ಮತ್ತು ಬಟ್ಟೆಯ ಟವೆಲ್ಗಳಿಗೆ ಬೇಗನೆ ಬೆಂಕಿ ಹತ್ತಿಕೊಳ್ಳುತ್ತದೆ. ಗಾಳಿಗೆ ಇವು ಜಾರಿ ಸ್ಟವ್ ಮೇಲೆ ಬಿದ್ದರೆ ತಕ್ಷಣ ಬೆಂಕಿ ಆವರಿಸಿಕೊಳ್ಳಬಹುದು.
ಮಸಾಲೆ ಡಬ್ಬಿಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು: ಸ್ಟವ್ನ ಶಾಖಕ್ಕೆ ಮಸಾಲೆಗಳ ಗುಣಮಟ್ಟ ಹಾಗೂ ರುಚಿ ಹಾಳಾಗುತ್ತದೆ. ಜೊತೆಗೆ ಎಲೆಕ್ಟ್ರಿಕ್ ಕೆಟಲ್, ಮಿಕ್ಸಿ, ಮೊಬೈಲ್ ಚಾರ್ಜರ್ ಹಾಗೂ ವೈರ್ಗಳನ್ನು ಸ್ಟವ್ ಹತ್ತಿರ ಇಡುವುದರಿಂದ ವಿದ್ಯುತ್ ಅವಘಡಗಳು ಸಂಭವಿಸಬಹುದು.
ಸ್ವಚ್ಛಗೊಳಿಸುವ ರಾಸಾಯನಿಕಗಳು: ಸಾನಿಟೈಸರ್, ಕ್ಲೀನಿಂಗ್ ಸ್ಪ್ರೇ ಅಥವಾ ಆಲ್ಕೋಹಾಲ್ ಅಂಶವಿರುವ ದ್ರವಗಳನ್ನು ಸ್ಟವ್ ಹತ್ತಿರ ಇಡಲೇಬಾರದು.
ಪಾಲಿಸಬೇಕಾದ ಅಗತ್ಯ ಮುನ್ನೆಚ್ಚರಿಕೆಗಳು
ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ಅನ್ನು ಗಮನಿಸದೆ ಎಲ್ಲೂ ಹೋಗಬೇಡಿ.
ಗ್ಯಾಸ್ ಲೀಕ್ ಆಗುತ್ತಿರುವ ವಾಸನೆ ಬಂದರೆ ತಕ್ಷಣ ರೆಗ್ಯುಲೇಟರ್ ಆಫ್ ಮಾಡಿ, ಯಾವುದೇ ಎಲೆಕ್ಟ್ರಿಕ್ ಸ್ವಿಚ್ ಆನ್/ಆಫ್ ಮಾಡದೆ ಬಾಗಿಲು-ಕಿಟಕಿಗಳನ್ನು ತೆರೆಯಿರಿ.
ಮಕ್ಕಳು ಗ್ಯಾಸ್ ಸ್ಟವ್ ಹತ್ತಿರ ಬರದಂತೆ ಎಚ್ಚರ ವಹಿಸಿ.
ಗ್ಯಾಸ್ ಪೈಪ್ ಮತ್ತು ರೆಗ್ಯುಲೇಟರ್ಗಳನ್ನು ಕಾಲಕಾಲಕ್ಕೆ ತಪಾಸಣೆ ನಡೆಸಿ, ಅಗತ್ಯವಿದ್ದರೆ ಬದಲಾಯಿಸಿ.









