Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ನಮ್ಮದು ಟೀಮ್ ಕರ್ನಾಟಕ’ – ಸರ್ಕಾರಿ ನೌಕರರಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸಂದೇಶ

---Advertisement---

ಬೆಂಗಳೂರು. ಆಗಸ್ಟ್.11 : ನಮ್ಮದು ‘ಟೀಮ್ ಕರ್ನಾಟಕ’ ನಾನು, ನನ್ನ ಮಂತ್ರಿಮಂಡಲ ಹಾಗೂ ಅಧಿಕಾರಿಗಳೆಲ್ಲರೂ ಸರ್ಕಾರಿ ನೌಕರರೇ. ನಮ್ಮ ಅಂತಿಮ ಗುರಿ ರಾಜ್ಯದ ಜನರ ಕಲ್ಯಾಣ. ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ. ಈ ಅವಕಾಶವನ್ನು ಅತ್ಯಂತ ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸರ್ಕಾರಿ ನೌಕರರೊಂದಿಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ಎಲ್ಲ ಸಿಎಂಗಳು ತಮ್ಮದೇ ಶೈಲಿಯಲ್ಲಿ ಆಡಳಿತ ನೀಡಿದ್ದಾರೆ. ಹನುಮಂತಯ್ಯನವರು ಜೈಲಿನ ಖೈದಿಗಳಿಂದ ವಿಧಾನಸೌಧ ನಿರ್ಮಿಸಿದರೆ, ಸರ್ ಎಂ. ವಿಶ್ವೇಶ್ವರಯ್ಯನವರು ₹1 ಸಂಭಾವನೆಗೆ ಕೆಲಸ ಮಾಡುತ್ತಿದ್ದರು ಎಂಬ ಇತಿಹಾಸವಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಟೀಕೆಗಳು ಸಾಯುತ್ತವೆ, ಆದರೆ ನಮ್ಮ ಕೆಲಸಗಳು ಉಳಿಯುತ್ತವೆ. ನಾವು ಅಧಿಕಾರದಲ್ಲಿದ್ದಾಗ ಯಾವ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ ಎಂಬುದು ಪ್ರಮುಖವಾಗಿದೆ ಎಂದರು.

ಜ್ಞಾನ ಮತ್ತು ಸಾಮರ್ಥ್ಯದ ನಾಡು: ಸರ್ಕಾರಿ ನೌಕರರ ಸೇವೆಯಿಂದಲೇ ನಮ್ಮ ರಾಜ್ಯ ಈ ಹಂತಕ್ಕೆ ಬೆಳೆದಿದೆ. ರಾಜ ಮಹಾರಾಜರ ಕಾಲದಿಂದ ಪರಿಶುದ್ಧ ಆಡಳಿತದ ಪರಿಣಾಮ, ನಮ್ಮ ವಿದ್ಯಾರ್ಥಿಗಳ ಜ್ಞಾನ, ಪ್ರತಿಭಾನ್ವಿತ ಮಾನವ ಸಂಪನ್ಮೂಲವೇ ಇದಕ್ಕೆ ಕಾರಣ. ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ, ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದರು, ಆದರೆ ಈಗ ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ.

ಆಡಳಿತದಲ್ಲಿ ಶಿಸ್ತು ಹಾಗೂ ಜವಾಬ್ದಾರಿ: ಪ್ರತಿಯೊಬ್ಬ ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸವಿದ್ದು ಕಾರ್ಯನಿರ್ವಹಿಸಬೇಕು. ‘ಪ್ರಜಾಸೇವೆ’ ಇಲಾಖೆ ಮೂಲಕ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ತಿಂಗಳ 1ನೇ ಮತ್ತು 3ನೇ ಶನಿವಾರ ತಾಲ್ಲೂಕು ಮಟ್ಟಕ್ಕೆ ತೆರಳಿ ಜನರ ಸಮಸ್ಯೆ ಬಗೆಹರಿಸಬೇಕು. ನಂತರ ಇದನ್ನು ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲೂ ಜಾರಿಗೆ ತರಬೇಕು. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಿ, ಬೇರೆಡೆಗೆ ಸ್ಥಳಾಂತರಿಸದೆ ‘Sharing and caring’ ಮಂತ್ರವನ್ನು ಅನುಸರಿಸಬೇಕು.

6ನೇ ಗ್ಯಾರಂಟಿ – ಉಚಿತ ಇ-ಖಾತೆ ಹಾಗೂ ಆಸ್ತಿ ದಾಖಲೆ: ಬೆಂಗಳೂರಿನಲ್ಲಿ 25 ಲಕ್ಷ ಇ-ಖಾತೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಪಟ್ಟಾ ದಾಖಲೆಗಳನ್ನು ಉಚಿತವಾಗಿ ನೀಡಲಾಗಿದೆ. ಲಂಚವಿಲ್ಲದೆ ಮನೆ ಬಾಗಿಲಿಗೆ ಆಸ್ತಿ ದಾಖಲೆ ತಲುಪಿಸುತ್ತಿರುವುದು ನಮ್ಮ ಸರ್ಕಾರದ 6ನೇ ಗ್ಯಾರಂಟಿಯಾಗಿದೆ. ಮುಂದಿನ 6-7 ತಿಂಗಳಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಿ, ಬಡವರು ಕಷ್ಟಪಟ್ಟು ಸಂಪಾದಿಸಿದ ಆಸ್ತಿಗೆ ಭದ್ರತೆ ನೀಡಲಾಗುವುದು.

ಪಾರದರ್ಶಕತೆ & ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ: ಭ್ರಷ್ಟಾಚಾರದ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ನಕಲಿ ಬಿಲ್ ಹಾಗೂ ಡಬಲ್ ಬಿಲ್ ಮಾಡುವವರನ್ನು ಸಹಿಸುವುದಿಲ್ಲ. ದಾಖಲೆ ತಿದ್ದುವುದಕ್ಕೆ ಬ್ರೇಕ್ ಹಾಕಲು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅಧಿವೇಶನ ಆದ ಮೇಲೆ ನಾನು ಪ್ರತಿ ತಾಲ್ಲೂಕಿಗೂ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳು: ನಮ್ಮ ಗ್ಯಾರಂಟಿ ಮಾದರಿ ಇಡೀ ದೇಶಕ್ಕೆ ಮಾದರಿಯಾಗಿದೆ, ಪ್ರಧಾನಮಂತ್ರಿಗಳು ಟೀಕಿಸಿದರೂ ನಂತರ ಅವರೇ ಪಾಲಿಸುವಂತಾಗಿದೆ. ಗ್ಯಾರಂಟಿ ಯೋಜನೆಯ ದುರ್ಬಳಕೆ ತಡೆದು, ನಮ್ಮ ರಾಜ್ಯದವರಿಗೆ ಮಾತ್ರ ತಲುಪುವಂತೆ ಪರಿಶೀಲಿಸಲಾಗುತ್ತಿದೆ. ಗ್ಯಾರಂಟಿ ಯೋಜನೆ ತ್ಯಜಿಸಲು ನಿರ್ಧರಿಸಿದ ಸರ್ಕಾರಿ ನೌಕರರ ಸಂಘಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಭಾರತ ಜೋಡೋ ಯುವ ಸಂಘ: ಯುವಕರಿಗೆ ಶಕ್ತಿ ತುಂಬಲು, ದೇಶಸೇವೆಯ ಅರಿವು ಮೂಡಿಸಲು ಹಾಗೂ ಅವರಲ್ಲಿನ ಪ್ರತಿಭೆಗೆ ವೇದಿಕೆ ಕಲ್ಪಿಸಲು ಇದು ಕ್ರಾಂತಿಕಾರಿ ಯೋಜನೆಯಾಗಿದೆ.

ಸ್ವಾತಂತ್ರ್ಯ ದಿನಾಚರಣೆ: ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.

ವಿಡಿಯೋ ಸಂವಾದದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮಣ ಸವದಿ, ಸಂತೋಷ್ ಲಾಡ್, ವಿಜಯಾನಂದ ಕಾಶಪ್ಪನವರ್, ಅಜಯ್ ಸಿಂಗ್, ಮುಖ್ಯಕಾರ್ಯದರ್ಶಿ ಶಾಲಿನಿ ರಾಜನೀಶ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ಅಪರ ಮುಖ್ಯ ಕಾರ್ಯದರ್ಶಿ (ಅಭಿವೃದ್ಧಿ) ಉಮಾ ಮಹದೇವನ್ ಅವರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now