ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 05 : ಜಿಲ್ಲೆಯ ಜನರು ನನ್ನ ಮೇಲಿಟ್ಟಿರುವ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುತ್ತೇನೆಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಟಿ.ರಘುಮೂರ್ತಿ ಭರವಸೆ ನೀಡಿದರು.


ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಟಿ.ರಘುಮೂರ್ತಿ ಬುಧವಾರ ನಗರದ ಮದಕರಿ ವೃತ್ತದಲ್ಲಿ ನಾಯಕ ಸಮಾಜದಿಂದ ವರ್ಣರಂಜಿತ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ನಾಯಕ ಜನಾಂಗದಲ್ಲಿ ಹುಟ್ಟಿರಬಹುದು. ಆದರೆ ಎಲ್ಲಾ ಜಾತಿಯವರನ್ನು ಜೊತೆಯಲ್ಲಿ ಕರೆದುಕೊಂಡು ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗ ಸದಾ ಬರಗಾಲಕ್ಕೆ ತುತ್ತಾಗುತ್ತಿರುವುದರಿಂದ ಆಗಸ್ಟ್ ಕೊನೆಯಲ್ಲಿ ಭದ್ರಾ ಮೇಲ್ದಂಡೆಯಿಂದ ನೀರು ಹರಿಸಲಾಗುವುದು. ಜಿಲ್ಲೆಯ ಜನರ ಕಷ್ಟ-ಸುಖ ಕೇಳಿ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಅದರಂತೆ ಪೂರಕ ಮಾಹಿತಿಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.
ನನಗೆ ಖಾತೆ ಯಾವುದು ಸಿಗುತ್ತದೆ ಎನ್ನುವುದು ಮುಖ್ಯವಲ್ಲ. ಸಚಿವ ಸ್ಥಾನ ನೀಡಿ ನನ್ನ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ವಹಿಸಿದೆ. ಹೊಸದುರ್ಗದ ಬಿ.ಜಿ.ಗೋವಿಂದಪ್ಪ ಮೊಳಕಾಲ್ಮುರುವಿನ ಎನ್.ವೈ.ಗೋಪಾಲಕೃಷ್ಣ, ಚಿತ್ರದುರ್ಗದ ಕೆ.ಸಿ.ವೀರೇಂದ್ರಪಪ್ಪಿ ಇವರುಗಳು ಸಚಿವರಾಗಲು ಅರ್ಹರಿದ್ದಾರೆ. ಆದರೆ ಅದೃಷ್ಟವೋ, ಹಣೆ ಬರಹವೋ, ದೈವ ಕೃಪೆಯೋ ನನಗೆ ಸಚಿವ ಸ್ಥಾನ ಒಲಿದು ಬಂದಿದೆ. ಹಿಂದುಳಿದ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ದಿಪಡಿಸುವುದು ನನ್ನ ಮುಂದಿರುವ ಗುರಿ ಎಂದು ಹೇಳಿದರು.
136 ಕಾಂಗ್ರೆಸ್ ಶಾಸಕರುಗಳಲ್ಲಿ 34 ಮಂದಿ ಸಚಿವರಾಗಿದ್ದೇವೆ. ಪ್ರತಿಷ್ಟೆ ಬಿಟ್ಟು ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದು ಜಿಲ್ಲೆಯ ಅಭಿವೃದ್ದಿಗೆ ಪಣ ತೊಡುತ್ತೇನೆ. ಭದ್ರಾ ಮೇಲ್ದಂಡೆ ಸೇರಿದಂತೆ ಹನಿ ನೀರಾವರಿ ಜಾರಿ ತರುವ ಚಿಂತನೆಯಿದೆ. ಬರ ನಿರ್ವಹಣೆಗೆ ಮೊದಲ ಆದ್ಯತೆ ಎಂದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ ಅಭಿವೃದ್ದಿ ಅಂದರೆ ರಘುಮೂರ್ತಿ. ರಘುಮೂರ್ತಿ ಅಂದರೆ ಅಭಿವೃದ್ದಿ ಎನ್ನುವಷ್ಟರ ಮಟ್ಟಿಗೆ ಚಳ್ಳಕೆರೆಯನ್ನು ಕೊಂಡೊಯ್ದಿದ್ದಾರೆ. ಸತತವಾಗಿ ಮೂರು ಬಾರಿ ಶಾಸಕರಾಗಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ಇವರ ಅಭಿವೃದ್ದಿಯನ್ನು ನೋಡಿ ರಾಜ್ಯ ಸರ್ಕಾರ ಮಂತ್ರಿ ಸ್ಥಾನ ನೀಡಿದೆ. ಇವರ ಅಧಿಕಾರವಧಿಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮಾದರಿಯಾಗಲಿ ಎಂದು ಹಾರೈಸಿದರು.
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡುತ್ತ ಅಜಾತಶತ್ರು ಎನಿಸಿಕೊಂಡಿರುವ ಟಿ.ರಘುಮೂರ್ತಿರವರು ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವುದು ಇಡಿ ಜಿಲ್ಲೆಯ ಜನರಿಗೆ ಖುಷಿಯಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುವುದು ಇವರ ದೊಡ್ಡ ಗುಣ. ಚಳ್ಳಕೆರೆಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಿರುವ ಇವರು ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ದಿಯತ್ತ ಕೊಂಡೊಯ್ದು ರಾಜ್ಯದಲ್ಲಿಯೆ ಮಾದರಿ ಜಿಲ್ಲೆಯನ್ನಾಗಿಸಲಿ ಎಂದು ಹರಸಿದರು.

ಚಿತ್ರದುರ್ಗ ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ಮುಖಂಡರುಗಳಾದ ಪ್ರೊ.ಗುಡ್ಡದೇಶ್ವರಪ್ಪ, ಅಹೋಬಲ ಶೋರೂಂನ ಅರುಣ್‍ಕುಮಾರ್, ದರ್ಶನ್ ಇಂಗಳದಾಳ್, ನಗರಸಭೆ ಮಾಜಿ ಸದಸ್ಯ ದೀಪು, ಮಹಾರಾಣಿ ಕಾಲೇಜಿನ ಆಡಳಿತಾಧಿಕಾರಿ ಸಂದೀಪ್, ಆನಂದಕುಮಾರ್, ಹೆಚ್.ಅಂಜಿನಪ್ಪ, ಸೋಮೇಂದ್ರ, ಮಂಜುನಾಥ್, ಅಶೋಕ್(ಜಿಮ್ಮಿ) ದಿನೇಶ್‍ಗೌಡಗೆರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಮಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥಗೊಪ್ಪೆ, ಅಲ್ಲಾಭಕ್ಷಿ ಸೇರಿದಂತೆ ಸಹಸ್ರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಮದಕರಿನಾಯಕ ವೃತ್ತದ ಸಮೀಪ ಸಾಲಾಗಿ ನಿಂತಿದ್ದ ಜೆ.ಸಿ.ಬಿ.ಗಳ ಮೂಲಕ ನೂತನ ಸಚಿವ ಟಿ.ರಘುಮೂರ್ತಿರವರಿಗೆ ಹೂವಿನ ಸುರಿಮಳೆ ಸುರಿಸಲಾಯಿತು.
ಮದಕರಿನಾಯಕ ಪ್ರತಿಮೆಯನ್ನು ಹೂವು ಹಾಗೂ ಬಾಳೆ ಕಂದಿನಿಂದ ಸಿಂಗರಿಸಲಾಗಿತ್ತು. ವೃತ್ತದ ನಾಲ್ಕು ಕಡೆಗಳಲ್ಲಿಯೂ ಸಚಿವ ಟಿ.ರಘುಮೂರ್ತಿರವರ ಬೃಹತ್ ಭಾವಚಿತ್ರಗಳು ಕಂಗೊಳಿಸುತ್ತಿದ್ದವು.
ಡೊಳ್ಳು, ತಮಟೆ, ಕಹಳೆ ಸದ್ದಿನ ಜೊತೆ ಪಟಾಕಿ ಬಾಣ ಬಿರುಸುಗಳನ್ನು ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.












