ಸುದ್ದಿಒನ್, ಚಳ್ಳಕೆರೆ, ಮೇ. 07 : ನಗರದ ಅಜ್ಜಯ್ಯನಗುಡಿ ರಸ್ತೆಯಲ್ಲಿರುವ ಪಂಚಮುಖೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ವೃದ್ಧಿಗೆ ಶೀಘ್ರ ಚೇತರಿಸಿಕೊಳ್ಳುವಂತೆ ವಿಶೇಷ ಪೂಜೆ ಹಾಗೂ ಮೃತ್ಯುಂಜಯ ಹೋಮವನ್ನು ನಡೆಸಲಾಯಿತು.
ರಾಜೀವ್ ಗಾಂಧಿ ಪಂಚಾಯಿತಿ ರಾಜ್ ಸಂಸ್ಥೆಯ ತಾಲ್ಲೂಕು ಅಧ್ಯಕ್ಷೆ ಹಾಗೂ ತಾಲ್ಲೂಕು ಆರೋಗ್ಯ ರಕ್ಷ ಸಮಿತಿ ಸದಸ್ಯೆ ಶ್ರೀಮತಿ ಉಷಾ ಚಂದ್ರಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೂಜೆ, ರುದ್ರಾಭಿಷೇಕ, ನವಗ್ರಹ ಶಾಂತಿ, ಆಂಜನೇಯ ಸಹಸ್ರನಾಮ ಪೂಜೆ, ಗಣಪತಿ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಉಷಾ ಚಂದ್ರಕುಮಾರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು, ಜನಸಾಮಾನ್ಯರ ಹೃದಯ ಗೆದ್ದ ರಾಜಕಾರಣಿಯಾಗಿದ್ದಾರೆ. ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಚಿವರು, ಜಿಲ್ಲೆಯ ಕಣ್ಮಣಿ ನಾಯಕರಾಗಿದ್ದಾರೆ.
ಸಚಿವರದು ಚಳ್ಳಕೆರೆ ಮೂಲ ಸ್ಥಳವಾಗಿದ್ದು, ಇಲ್ಲಿಯೂ ಶಾಸಕರಾಗಿ ಅಪಾರ ಸೇವೆ ಮಾಡಿದ್ದಾರೆ. ಇಂತಹ ಧೀಮಂತ ನಾಯಕ ನೂರ್ಕಾಲ ಬಾಳಿ ಬೆಳಗಬೇಕು. ಇವರಿಂದ ನಾಡಿಗೆ ಒಳಿತಾಗುತ್ತದೆ. ಇವರು ಬೇಗ ಚೇತರಿಸಿಕೊಳ್ಳಲಿ, ಬೇಗ ಮತ್ತೇ ಜನ ಸೇವೆಗೆ ತೊಡಗಲಿ ಎಂದು ಹಾರೈಸಿದರು.
ಪುರೋಹಿತರಾದ ತ್ಯಾಗರಾಜ ಜೋಷಿ ಹಾಗೂ ಸುಬ್ರಹ್ಮಣ್ಯ ಸ್ವಾಮೀಜಿ ಅವರುಗಳು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರಾದ ಶಿವಶಂಕರ್, ನಾಗರಾತ್ನ, ಗೀತಾ, ಮಲ್ಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.



















