ದೆಹಲಿ: ರೈಲ್ವೆ ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್ ಈಸ್ಟ್ ಕೋಸ್ಟ್ ರೈಲ್ವೆ (East Coast Railway) 2026ನೇ ಸಾಲಿನ ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ (GDCE) ಮೂಲಕ ಒಟ್ಟು 1,421 ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 14, 2026ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ (ALP), ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಎಂಜಿನಿಯರ್ (JE), ಟೆಕ್ನಿಷಿಯನ್, ಜೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್, ಕಮರ್ಷಿಯಲ್ ಕ್ಲರ್ಕ್-ಕಮ್-ಟಿಕೆಟ್ ಕಲೆಕ್ಟರ್ ಸೇರಿದಂತೆ ವಿವಿಧ ಹುದ್ದೆಗಳು ಸೇರಿವೆ.
ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ?
ಅಸಿಸ್ಟೆಂಟ್ ಲೋಕೋ ಪೈಲಟ್ (ALP): 10ನೇ ತರಗತಿ ಉತ್ತೀರ್ಣರಾಗಿದ್ದು, ಸಂಬಂಧಿತ ಟ್ರೇಡ್ನಲ್ಲಿ ITI ಅಥವಾ ಅಪ್ರೆಂಟಿಸ್ಶಿಪ್ ಅರ್ಹತೆ ಹೊಂದಿರಬೇಕು. ಸಂಬಂಧಿತ ಎಂಜಿನಿಯರಿಂಗ್ ಡಿಪ್ಲೊಮಾ/ಪದವೀಧರರೂ ಅರ್ಜಿ ಸಲ್ಲಿಸಬಹುದು.
ಸ್ಟೇಷನ್ ಮಾಸ್ಟರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ಗೂಡ್ಸ್ ಟ್ರೈನ್ ಮ್ಯಾನೇಜರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ಜೂನಿಯರ್ ಎಂಜಿನಿಯರ್ (JE): ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಅಥವಾ ಪದವಿ.
ಟೆಕ್ನಿಷಿಯನ್: 10ನೇ ತರಗತಿ ಜೊತೆಗೆ ಸಂಬಂಧಿತ ಟ್ರೇಡ್ನಲ್ಲಿ ITI ಅಥವಾ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ.
ಜೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್: 12ನೇ ತರಗತಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ನಲ್ಲಿ ಹಿಂದಿ ಅಥವಾ ಇಂಗ್ಲಿಷ್ ಟೈಪಿಂಗ್ ಜ್ಞಾನ ಅಗತ್ಯ.
ಕಮರ್ಷಿಯಲ್ ಕ್ಲರ್ಕ್-ಕಮ್-ಟಿಕೆಟ್ ಕಲೆಕ್ಟರ್: 12ನೇ ತರಗತಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ಶೇ.50 ಅಂಕ ಅಗತ್ಯ.
ವಯೋಮಿತಿ ಎಷ್ಟು?
ಅಭ್ಯರ್ಥಿಗಳ ವಯಸ್ಸನ್ನು ಜನವರಿ 1, 2027ರ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 42 ವರ್ಷ. OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ. ಹೀಗಾಗಿ OBC ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 47 ವರ್ಷ ವಯೋಮಿತಿ ಇರಲಿದೆ.
ವೇತನ ಎಷ್ಟು?
ಹುದ್ದೆಗೆ ಅನುಗುಣವಾಗಿ ರೈಲ್ವೆಯ ವೇತನ ಮಟ್ಟ ನಿಗದಿಯಾಗಲಿದೆ. ALP ಮತ್ತು ಟೆಕ್ನಿಷಿಯನ್ಗಳಿಗೆ ಪೇ ಲೆವೆಲ್-2, ಕಮರ್ಷಿಯಲ್ ಕ್ಲರ್ಕ್-ಕಮ್-ಟಿಕೆಟ್ ಕಲೆಕ್ಟರ್ಗೆ ಲೆವೆಲ್-3, ಗೂಡ್ಸ್ ಟ್ರೈನ್ ಮ್ಯಾನೇಜರ್ಗೆ ಲೆವೆಲ್-5, ಸ್ಟೇಷನ್ ಮಾಸ್ಟರ್ ಮತ್ತು ಜೂನಿಯರ್ ಎಂಜಿನಿಯರ್ಗೆ ಲೆವೆಲ್-6 ವೇತನ ಶ್ರೇಣಿ ಅನ್ವಯವಾಗಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ
ಅರ್ಜಿ ಪ್ರಕ್ರಿಯೆ ಆಗಸ್ಟ್ 15, 2026ರಿಂದ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 14, 2026ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ ಮತ್ತು ನಿಯಮಗಳನ್ನು ಪರಿಶೀಲಿಸುವುದು ಅಗತ್ಯ.














