ಸುದ್ದಿಒನ್, ಮೊಳಕಾಲ್ಮೂರು, ಏಪ್ರಿಲ್. 19 : ತಾಲ್ಲೂಕಿನಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಂಪುರ ಪೊಲೀಸರು ಬಂಧಿಸಿ ಅವರಿಂದ 2,10,000 ರೂಪಾಯಿ ನಗದು ಸೇರಿದಂತೆ ಒಟ್ಟು
7,10,000/- ರೂ ( ಏಳು ಲಕ್ಷದ ಹತ್ತು ಸಾವಿರ) ಬೆಲೆ ಬಾಳುವ ನಗದು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮೊಳಕಾಲ್ಮೂರು ತಾಲ್ಲೂಕಿನ ಕರಡಿಹಳ್ಳಿ ಗ್ರಾಮದ ಅಸಾಂ, ಕೋನಾಪುರ ಗ್ರಾಮದ ರಾಮಾರಂಜನೇಯ ಮತ್ತು ಶಿವರಾಜ ಬಂಧಿತರು. ಕಳೆದ ಮಾರ್ಚ್ ತಿಂಗಳಲ್ಲಿ ಮೊಳಕಾಲ್ಮರು ತಾಲ್ಲೂಕು ಓಬಳಾಪುರ ಗ್ರಾಮದ ಗೋವಿಂದರೆಡ್ಡಿ ರವರ ಬಾಬು 02 ಎತ್ತುಗಳು ಮತ್ತು ಶೇಖರಪ್ಪ ರವರ ಬಾಬು 01 ಎತ್ತನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ರಂಜಿತ್ ಕುಮಾರ್ ಬಂಡಾರು, ಪೊಲೀಸ್ ಅಧೀಕ್ಷಕರು, ಡಾ. ಶಿವಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸತ್ಯ ನಾರಾಯಣ ರಾವ್, ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ, ಆರ್. ನಾಗರಾಜ, ಸಿಪಿಐ ಮೊಳಕಾಲೂರು ವೃತ್ತ ನಿರೀಕ್ಷಕರು ರವರ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಲು ರಾಂಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಬಾಹುಬಲಿ ಎಂ. ಪಡನಾಡ, ಮತ್ತು ಪಿ ಎಸ್ ಐ ಲಕ್ಷ್ಮೀನಾರಾಯಣಪ್ಪ ಹಾಗೂ ಸಿಬ್ಬಂದಿವರಾದ ಗೋಣೆಪ್ಪ ಎಸ್.ಹೆಚ್, ತಿಮ್ಮಾರೆಡ್ಡಿ, ಅಶೋಕ, ಕುಬೇರ. ಈ. ಶಶಿಕುಮಾರ, ವಿಶಾಲ್, ಮಹಾಂತೇಶ, ಚಾಲಕ ಮಂಜುನಾಥ ಗಡಿಹಳ್ಳಿ ಹಾಗೂ ಜಿಲ್ಲಾ ಕಂಪ್ಯೂಟರ್ ವಿಭಾಗದ ಪ್ರಕಾಶ, ಸತೀಶ್ ಒಳಗೊಂಡ ತಂಡವನ್ನು ರಚನೆ ಮಾಡಿದ್ದರು.
ಈ ತಂಡವು ಖಚಿತವಾದ ಮಾಹಿತಿ ಮೇರೆಗೆ ಏಪ್ರಿಲ್ 18 ರಂದು ಮೊಳಕಾಲ್ಮರು ತಾಲ್ಲೂಕು ಕಣಕುಪ್ಪೆ ಕ್ರಾಸ್ ಬಳಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡಲಾಯಿತು.
ಈ ವೇಳೆ ಮೊಗಲಹಳ್ಳಿ ಗ್ರಾಮದಲ್ಲಿ 01 ಎತ್ತು, ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ 02 ಆಕಳು ಮತ್ತು 01 ಎಮ್ಮೆ, ಓಬಳಾಪುರ ಗ್ರಾಮದಲ್ಲಿ 03 ಎತ್ತುಗಳು, ರಾಜಾಪುರ ಗ್ರಾಮದಲ್ಲಿ 02 ಎಮ್ಮೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತನಿಖೆಯಿಂದ ಕಂಡು ಬಂದಿರುತ್ತದೆ. ಜಾನುವಾರಗಳನ್ನು ಕದ್ದೊಯ್ಯಲು ಬಳಸಿದ್ದ ಸುಮಾರು 05 ಲಕ್ಷ ಬೆಲೆಬಾಳುವ ಅಶೋಕ ಲೈಲಾಂಡ್ ಗೂಡ್ಸ್ ವಾಹನವನ್ನು ಮತ್ತು ಆರೋಪಿತರು ಕಳ್ಳತನ ಮಾಡಿದ್ದ ದನಗಳನ್ನು ಮಾರಾಟ ಮಾಡಿ ಬಂದ ಒಟ್ಟು 2,10,000/- ರೂ ನಗದು ಹಣವನ್ನು ಒಟ್ಟು 7,10,000/- ರೂ ( ಏಳು ಲಕ್ಷ ಹತ್ತು ಸಾವಿರ) ಬೆಲೆ ಬಾಳುವ ನಗದು ಹಣ ಮತ್ತು ವಾಹನವನ್ನು ವಶಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಪೊಲೀಸ್ ಅಧೀಕ್ಷಕರು ರಾಂಪುರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

















