ಸುದ್ದಿಒನ್,ಮೈಸೂರು ಮೇ.06 : ಆರೋಗ್ಯ ಇಲಾಖೆ ಎನ್ನುವುದು ಕೇವಲ ಸರ್ಕಾರಿ ಕಚೇರಿಯಲ್ಲ, ಅದು ಜನರ ಪಾಲಿನ ಸಂಜೀವಿನಿ. ಇಲ್ಲಿ ಸೇವೆ ಸಲ್ಲಿಸುವವರು ಕನಿಷ್ಠ ಶಿಸ್ತು ಮತ್ತು ಸೇವಾ ಮನೋಭಾವವನ್ನು ಹೊಂದಿರಲೇಬೇಕು,” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಇತ್ತೀಚೆಗೆ ವೈದ್ಯಕೀಯ ಸಿಬ್ಬಂದಿಯ ಅಶಿಸ್ತಿನ ವರ್ತನೆಗಳ ಬಗ್ಗೆ ಸರಣಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ.
ವಿಜಯಪುರ ಜಿಲ್ಲೆಯ ವಂದಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜಶೇಖರ್ ಸಜ್ಜನ ಅವರು ಮದ್ಯಪಾನ ಮಾಡಿ ಆಸ್ಪತ್ರೆಗೆ ಬಂದಿದ್ದಲ್ಲದೆ, ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಸದರಿ ವೈದ್ಯಾಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಲು ಆದೇಶಿಸಿದ್ದಾರೆ.
ಕರ್ತವ್ಯದ ಸಮಯದಲ್ಲಿ ಮದ್ಯಪಾನ ಮಾಡುವುದು, ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುವುದು ಅಥವಾ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಿಮ್ಮ ಹುದ್ದೆ ಅಥವಾ ಪ್ರಭಾವ ಎಷ್ಟೇ ಇರಲಿ, ಅಶಿಸ್ತು ತೋರಿದರೆ ಕ್ಷಣಾರ್ಧದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಲಾಗಿದೆ.
ನಾವು ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿದ್ದೇವೆ. ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುವವರಿಗೆ ಅಥವಾ ಇಲಾಖೆಯ ಘನತೆಗೆ ಧಕ್ಕೆ ತರುವವರಿಗೆ ಇಲಾಖೆಯಲ್ಲಿ ಸ್ಥಾನವಿಲ್ಲ.ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ಇರುವುದು ಜನಸೇವೆಗಾಗಿ. ಇಲ್ಲಿ ಶಿಸ್ತು ಉಲ್ಲಂಘಿಸುವವರಿಗೆ ಸ್ಥಾನವಿಲ್ಲ. ಬಡವರ ಸೇವೆ ಮಾಡದಿದ್ದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.






