ರಾಜ್ಯಸಭೆಯ ನಿರ್ಗಮಿತ ಸದಸ್ಯರಿಗೆ ಬೀಳ್ಕೊಡುಗೆ ನೀಡುವ ವೇಳೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ ಹಾಸ್ಯಮಯ ಹೇಳಿಕೆ ಸದನದಲ್ಲಿ ನಗೆಗಡಲನ್ನುಂಟುಮಾಡಿತು.ಭಾಷಣದ ವೇಳೆ ಮಾಜಿ ಪ್ರಧಾನಿ ಎಚ್‌ಡಿ ದೇವೆಗೌಡ ಅವರನ್ನು ಉಲ್ಲೇಖಿಸಿದ ಖರ್ಗೆ, “ಅವರು ನಮ್ಮನ್ನು (ಕಾಂಗ್ರೆಸ್) ಪ್ರೀತಿಸಿದರು, ಆದರೆ ಮದುವೆಯಾದದ್ದು ನರೇಂದ್ರ ಮೋದಿ ಅವರನ್ನೇ” ಎಂದು ವ್ಯಂಗ್ಯವಾಡಿದರು. ಈ ಮಾತು ಕೇಳಿ ಸದನದಲ್ಲಿದ್ದ ಸದಸ್ಯರು ಸೇರಿದಂತೆ ಪ್ರಧಾನಿಯೂ ನಗುವಲ್ಲಿ ತೇಲಿದರು.
ಖರ್ಗೆ ತಮ್ಮ ಭಾಷಣದಲ್ಲಿ ದೇವೇಗೌಡರೊಂದಿಗೆ ಇರುವ ದೀರ್ಘಕಾಲದ ಸ್ನೇಹವನ್ನು ನೆನಪಿಸಿಕೊಂಡು, “ನಾವು ಸುಮಾರು 54 ವರ್ಷಗಳಿಂದ ಪರಿಚಯದಲ್ಲಿದ್ದೇವೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ದೇಶಸೇವೆ ಎಂಬ ಉದ್ದೇಶ ನಮ್ಮನ್ನು ಒಂದಾಗಿಸುತ್ತದೆ” ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಹಿರಿಯ ನಾಯಕರನ್ನು ಕೊಂಡಾಡಿ, “ದೇವೇಗೌಡರು, ಖರ್ಗೆ ಮತ್ತು ಶರದ್ ಪವಾರ್ ಅವರಂತಹ ನಾಯಕರ ಅನುಭವ ದೇಶಕ್ಕೆ ಅಮೂಲ್ಯ. ಹೊಸ ಸಂಸದರು ಇವರಿಂದ ಸಾಕಷ್ಟು ಕಲಿಯಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವನ್ನು ಹಾಸ್ಯಮಯವಾಗಿ ಪ್ರಸ್ತಾಪಿಸಿದ ಖರ್ಗೆ ಅವರ ಮಾತು ಸದನದ ಗಮನ ಸೆಳೆಯಿತು. ಈ ವ್ಯಂಗ್ಯವನ್ನು ದೇವೇಗೌಡರು ಸಹ ನಗುಮುಖದಿಂದ ಸ್ವೀಕರಿಸಿದ್ದು, ಸದನದಲ್ಲಿ ಸೌಹಾರ್ದ ವಾತಾವರಣ ಮೂಡಿಸಿತು.










