ಸುದ್ದಿಒನ್, ಚಿತ್ರದುರ್ಗ, ಸೆ.04 : ಜಿಲ್ಲೆಯ ದಶಕಗಳ ಕನಸು ಕೊನೆಗೂ ನನಸಾಗುವ ಕಾಲ ಹತ್ತಿರವಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಪ್ರಥಮವಾಗಿ ಭದ್ರಾ ನದಿಯ ನೀರನ್ನು ಸೆ.6 ರಿಂದ ಪ್ರಾಯೋಗಿಕವಾಗಿ ಹರಿಸಲಾಗುತ್ತಿದೆ.
ಸರ್ಕಾರದ ಆದೇಶ ಅನ್ವಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವು ನೀರು ಹರಿಸಲು ಕ್ರಮ ಕೈಗೊಂಡಿದ್ದು, ಇದು ಜಿಲ್ಲೆಯ ಜನತೆಯಲ್ಲಿ ಹಾಗೂ ರೈತರಲ್ಲಿ ತೀವ್ರ ಸಂತಸ ಮತ್ತು ಉತ್ಸಾಹವನ್ನು ಮೂಡಿಸಿದೆ.

ಸೆ.6 ರಿಂದ ಭದ್ರಾ ಜಲಾಶಯದಿಂದ ನೀರನ್ನು ಹರಿಸಲಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯ ಚೈ. 0.00 ಕಿಮೀ ನಿಂದ ಚೈ. 114.142 ಕಿಮೀ ವರೆಗೆ ನೀರು ತಲುಪಲಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ತಾಲೂಕುಗಳ ಮೂಲಕ ಹಾದುಹೋಗಿ ಗೋನೂರು ಕೆರೆಯವರೆಗೆ ನೀರು ಹರಿಯಲಿದೆ. ಮುಂದಿನ ಹಂತದಲ್ಲಿ ನೈಸರ್ಗಿಕ ಹಳ್ಳದ ಮುಖಾಂತರ ಚಳ್ಳಕೆರೆ ತಾಲೂಕಿನ ರಾಣೇಕೆರೆ ವರೆಗೆ ನೀರನ್ನು ಹರಿಸಲಾಗುತ್ತದೆ.

*ಸಾರ್ವಜನಿಕ ಸುರಕ್ಷತೆ ಮತ್ತು ಮುಂಜಾಗ್ರತಾ ಸೂಚನೆಗಳು:*
ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕಾಲುವೆ ಹಾಗೂ ಹಳ್ಳಗಳ ಪಾತ್ರಗಳಲ್ಲಿ ಸಾರ್ವಜನಿಕರು ಓಡಾಡುವುದು, ಜನ-ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು, ಕಾಲುವೆ/ಹಳ್ಳಗಳಲ್ಲಿ ಈಜಾಡುವುದು ಹಾಗೂ ಇನ್ನಿತರ ಅಪಾಯಕಾರಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಗಮದ ಆಸ್ತಿಯಾದ ನೀರಾವರಿ ಕಾಲುವೆ ಅಥವಾ ಕಟ್ಟಡಗಳನ್ನು ಹಾನಿಗೊಳಿಸುವುದು ಹಾಗೂ ಅನಧಿಕೃತವಾಗಿ ಪಂಪ್ಸೆಟ್ಗಳನ್ನು ಅಳವಡಿಸಿ ನೀರನ್ನು ಎತ್ತುವುದು ಕಾನೂನುಬಾಹಿರವಾಗಿದೆ. ಈ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ನೀರಾವರಿ ಕಾಯ್ದೆ ಮತ್ತು ಕಾನೂನು ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.
ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನದಿ ನೀರು ಹರಿಯುತ್ತಿರುವುದು ಕೃಷಿ ಮತ್ತು ಕುಡಿಯುವ ನೀರಿನ ಅಭಾವಕ್ಕೆ ದೊಡ್ಡ ಪರಿಹಾರ ಸಿಕ್ಕಂತಾಗಿದ್ದು, ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ನೆಲೆಸಿದೆ.










