ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 : ಬಯಲುಸೀಮೆ ಜನರ ಬಹು ದಶಕದ ಕನಸು ನನಸಾಗುವ ದಿನ ಸೆ.6ರಂದು ನಿಗದಿ ಆಗಿದ್ದು ಈ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ಒಂದೇಡೆ ಸೇರೋಣಾ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕರೆ ನೀಡಿದೆ.
ಚಿತ್ರದುರ್ಗ ಶಾಖಾ ಕಾಲುವೆಯ ಕೊನೇ ಭಾಗ ಗೋನೂರು ಬಳಿಗೆ ಸೆ.8ರ ರಾತ್ರಿ ಅಥವಾ 9ರ ಬೆಳಗ್ಗೆ ನೀರು ಬರುವ ಸಾಧ್ಯತೆ ಇದ್ದು, ಈ ಸಂದರ್ಭ ನಾವೆಲ್ಲೂ ಆ ಸ್ಥಳದಲ್ಲಿದ್ದು ಜಿಲ್ಲೆ ಪ್ರವೇಶಿಸಿದ ತಾಯಿ ಭದ್ರೆಗೆ ಗೌರವ ಸಲ್ಲಿಸುವುದು ಬಹಳ ಅಗತ್ಯ. ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯಸ್ಥರ ಜೊತೆ ದಿನಾಂಕ ಖಚಿತ ಪಡಿಸಿಕೊಂಡು, ಸಂಭ್ರಮದ ಸಭೆ ಆಯೋಜಿಸಲಾಗುವುದು.

ಸಮಿತಿಯ ಅಧ್ಯಕ್ಷ ಪಿ.ಕೋದಂಡರಾಮಯ್ಯ, ದಿವಂಗತರಾದ ಹೆಚ್.ಹನುಮಂತಪ್ಪ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಪ್ರಧಾನ ಸಂಚಾಲಕ ಡಾ. ಬಂಜಗೆರೆ ಪ್ರಕಾಶ್ ಸೇರಿ ಸಾವಿರಾರು ಮಂದಿ ಜನರು, ಮಠಾಧೀಶರು ಹಾಗೂ ಎಲ್ಲ ಪಕ್ಷಗಳ ಸಹಕಾರ ಹಾಗೂ ಹೋರಾಟದ ಫಲ ಭದ್ರೆ ನೀರು ಹರಿಯಲು ಆರಂಭಿಸಿದೆ. ಆದ್ದರಿಂದ ಭದ್ರೆ ನೀರು ಗೋನೂರು ಬಳಿ ಆಗಮಿಸುವ ಕ್ಷಣವನ್ನು ಕಣ್ತುಂಬಿಕೊಳ್ಳುವ ಅಗತ್ಯ ಇದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.










