ಟಿ.ವಿ, ಮೊಬೈಲ್‍ನಿಂದ ಮಕ್ಕಳನ್ನು ದೂರವಿರಿಸಿ : ಡಿಡಿಪಿಐ
ಎಂ.ಆರ್.ಮಂಜುನಾಥ್
Keep children away from TV, mobile: DDPI M.R. Manjunath
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 18 : ಉರ್ದು ಮಾಧ್ಯಮದಲ್ಲಿ ಫಲಿತಾಂಶ ಸುಧಾರಣೆಯಾಗಬೇಕಾಗಿರುವುದರಿಂದ ಮಕ್ಕಳ ಮನಸ್ಸಿಗೆ ನಾಟುವಂತೆ ಬೋಧಿಸಿ ಮನೋಸ್ಥೈರ್ಯ ತುಂಬುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಕರೆ ನೀಡಿದರು.
ಮುಸ್ಲಿಂ ಎಜುಕೇಷನಲ್ ಅಂಡ್ ಎಂಪರ್ಮೆಂಟ್ ಟ್ರಸ್ಟ್ ವತಿಯಿಂದ ಜಿಲ್ಲೆಯ ಆರು ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಉರ್ದು ಶಿಕ್ಷಕರುಗಳಿಗೆ ಅಹಮದ್ ಪ್ಯಾಲೇಸ್‍ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವರ್ಣಮಾಲೆ ಅಕ್ಷರ ಲಿಪಿಯಿಂದ ಹಿಡಿದು ಶುದ್ದವಾಗಿ ಬರೆಯುವುದನ್ನು ಮೊದಲು ಮಕ್ಕಳಿಗೆ ಕಲಿಸಬೇಕು. ಕೇಳಿಸಿಕೊಳ್ಳುವುದು, ಮಾತನಾಡುವುದು, ಓದುವುದು, ಬರೆಯುವುದು ಸರಿಯಿದ್ದಾಗ ಗಣಿತ, ಆಂಗ್ಲ, ವಿಜ್ಞಾನ ಭಾಷೆಗಳನ್ನು ಸುಲಭವಾಗಿ ಅರ್ಥಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಟಿ.ವಿ.ಮೊಬೈಲ್‍ನಿಂದ ಮಕ್ಕಳನ್ನು ದೂರವಿರಿಸಿ. ಪೋಷಕರುಗಳು ಮಕ್ಕಳ ಶಿಕ್ಷಣದ ಕಡೆ ಹೆಚ್ಚಿನ ನಿಗಾವಹಿಸಬೇಕು. ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಶೂ

ಸಾಕ್ಸ್, ಮೊಟ್ಟೆ, ಬಾಳೆಹಣ್ಣು ಹೀಗೆ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿದೆ. ಬಳಸಿಕೊಂಡು ಶಿಕ್ಷಣವಂತರಾಗಬೇಕು ಎಂದು ಹೇಳಿದರು.
ನಿಧಾನಗತಿಯಲ್ಲಿ ಕಲಿಯುವ ಮಕ್ಕಳ ಪಟ್ಟಿ ಮಾಡಿ ಯಾವ ವಿಷಯದ ಕಲಿಕೆಯಲ್ಲಿ ಹಿಂದಿದ್ದಾರೆನ್ನುವುದನ್ನು ಗಮನಿಸಿ ಸರ್ವತೋಮುಖ ಬೆಳವಣಿಗೆಗೆ ಉರ್ದು ಶಿಕ್ಷಕರು ಶ್ರಮಿಸಬೇಕು. ಯಾವುದೇ ಭಾಷೆಯನ್ನಾಗಲಿ ಸರಳವಾಗಿ ಕಲಿಸಿ. ಕೂಡುವುದು, ಕಳೆಯುವುದು, ಭಾಗಿಸುವುದು ಸರಿಯಾಗಿ ಬರಬೇಕು. ಅದಕ್ಕಾಗಿ ಮಕ್ಕಳಿಗೆ ಪ್ರತಿನಿತ್ಯವು ಡ್ರಿಲ್ಲಿಂಗ್ ಮಾಡಬೇಕು. ತರಗತಿಯಲ್ಲಿ ಮಕ್ಕಳನ್ನು ಬೈಯುವ ಬದಲು ಪ್ರೋತ್ಸಾಹಿಸಿ ಶಿಕ್ಷಣದ ಕಡೆ ಆಸಕ್ತಿ ಮೂಡುವಂತೆ ನೋಡಿಕೊಳ್ಳಿ. ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿರುತ್ತದೆ ಗುರುತಿಸುವುದು ನಿಮ್ಮ ಕೈಯಲ್ಲಿದೆ. ರಾಷ್ಟ್ರಪತಿ ಅಬ್ದುಲ್‍ಕಲಾಂ ಕಡುಬಡತನದಿಂದ ಮೇಲೆ ಬಂದು ಸಾಧನೆಗೈದವರು. ಅಂತಹ ಸಾಧಕರು ಬಹಳಷ್ಟಿದ್ದಾರೆ. ಅವರುಗಳ ಆಚಾರ, ವಿಚಾರ, ನಡೆ, ನುಡಿಯನ್ನು ಮಕ್ಕಳು ಪಾಲಿಸಬೇಕಿದೆ. ಮಕ್ಕಳನ್ನು ತಿದ್ದಿ ತೀಡಿ ಸರಿದಾರಿಗೆ ತಂದರೆ ದೇಶಕ್ಕೆ ಮಾನವ ಸಂಪತ್ತನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಭವಿಷ್ಯಕ್ಕೆ ಶಿಕ್ಷಕರುಗಳು ದಾರಿ ದೀಪವಾಗಬೇಕೆಂದು ಎಂ.ಆರ್.ಮಂಜುನಾಥ್ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುತ್ತಿದ್ದರೂ ಕಳೆದ ಐದು ಆರು ವರ್ಷಗಳಿಂದ ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಇದರಿಂದ ಶಿಕ್ಷಕರುಗಳ ಸಂಖ್ಯೆಯೂ ಸಹಜವಾಗಿ ಕಡಿತಗೊಳ್ಳುತ್ತದೆ. 2010 ರಲ್ಲಿ ಜಿಲ್ಲೆಯಲ್ಲಿ ಐದುನೂರಕ್ಕೂ ಹೆಚ್ಚು ಉರ್ದು ಶಿಕ್ಷಕರುಗಳಿದ್ದರು. ಏಕೆ ಕಡಿಮೆಯಾಗಿದೆ ಎನ್ನುವುದರ ಚಿಂತನ ಮಂಥನವಾಗಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ ಮಕ್ಕಳು ಶೈಕ್ಷಣಿಕವಾಗಿ ಬದಲಾವಣೆಯಾಗಬೇಕಿದೆ ಎಂದು ಹೇಳಿದರು.

ಶಿಕ್ಷಕರುಗಳು ಆಸಕ್ತಿಯಿಂದ ಕೆಲಸ ಮಾಡದಿದ್ದರೆ ಜಿಲ್ಲೆಯಲ್ಲಿ ಉರ್ದು ಶಾಲೆಗಳು ಬೇರೆ ಶಾಲೆಗಳ ಜೊತೆ ವಿಲೀನವಾಗುವುದರಲ್ಲಿ ಅನುಮಾನವಿಲ್ಲ. ಮಾತೃ ಭಾಷೆಯಲ್ಲಿ ಮಗುವಿನ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡದಿದ್ದರೆ ಸರ್ಕಾರಿ ಶಾಲೆಗಳು ಉಳಿಯುವುದಿಲ್ಲ. ಮಗುವಿನ ಸರ್ವತೋಮುಖ ಬೆಳೆವಣಿಗೆಗೆ ಶಿಕ್ಷಕರುಗಳು ಪೂರಕವಾಗಿ ಕೆಲಸ ಮಾಡುವುದೆ ನಿಜವಾದ ಶಿಕ್ಷಣ. ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿದಾಗ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಶಾಲೆ ಬಿಟ್ಟ ಮಕ್ಕಳ ಕಡೆ ಪೋಷಕರುಗಳು ಗಮನ ಕೊಡಿ. ಉರ್ದು ಶಾಲೆಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಶಿಕ್ಷಕರುಗಳಲ್ಲಿ ಮನವಿ ಮಾಡಿದರು.
ಮುಸ್ಲಿಂ ಎಜುಕೇಷನಲ್ ಅಂಡ್ ಎಂಪವರ್ಮೆಂಟ್ ಟ್ರಸ್ಟ್ ಅಧ್ಯಕ್ಷ ನಿವೃತ್ತ ಡಿ.ವೈ.ಎಸ್ಪಿ. ಸೈಯದ್ ಇಸಾಕ್ ಮಾತನಾಡುತ್ತ ಟ್ರಸ್ಟ್ ಆರಂಭಿಸಿ ಐದು ವರ್ಷಗಳಾಯಿಗಿದೆ ಅಂದಿನಿಂದ ಪ್ರತಿ ವರ್ಷವೂ ಜಿಲ್ಲೆಯ ಉರ್ದು ಶಿಕ್ಷಕರುಗಳಿಗೆ ಕಾರ್ಯಾಗಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಉರ್ದು ಮಾಧ್ಯಮ ಶಾಲೆಗಳಲ್ಲಿ ಕಡಿಮೆ ಫಲಿತಾಂಶ ಬರುತ್ತಿರುವುದು ಮನಸ್ಸಿಗೆ ನೋವುಂಟಾಗುತ್ತದೆ. ಮುಸ್ಲಿಂ ಸಮಾಜದ ಮಕ್ಕಳು ಶಾಲೆ ಬಿಟ್ಟು ಚಿಕ್ಕಂದಿನಲ್ಲಿಯೇ ಕೆಲಸಕ್ಕೆ ಹೋಗುವ ಬದಲು ಶಿಕ್ಷಣವಂತರಾಗಬೇಕೆಂಬುದು ನನ್ನ ಆಸೆ. ಅದಕ್ಕೆ ಶಿಕ್ಷಕರುಗಳ ಪರಿಶ್ರಮವೂ ಮುಖ್ಯ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಸ್ಲಿಂ ಮಕ್ಕಳು ಸದೃಢರಾಗಬೇಕಾದರೆ ಮೊದಲು ವಿದ್ಯಾವಂತರಾಗಬೇಕೆಂದು ಹೇಳಿದರು.
ಉರ್ದು ಮಾಧ್ಯಮ ಶಾಲೆಗಳ ಶಿಕ್ಷಕರುಗಳನ್ನು ಅಪ್ಡೇಟ್ ಮಾಡುವುದು ನಮ್ಮ ಟ್ರಸ್ಟ್‍ನ ಉದ್ದೇಶ. ಶಿಕ್ಷಣದ ಜೊತೆ ಗುರು-ಹಿರಿಯರು ತಂದೆ-ತಾಯಿಗಳನ್ನು ಗೌರವಿಸುವ ಗುಣ ಮಕ್ಕಳಲ್ಲಿ ಬೆಳೆಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಉರ್ದು ಶಿಕ್ಷಕರುಗಳಿಗೆ ತಿಳಿಸಿದರು.
ನಿವೃತ್ತ ಡಿ.ವೈ.ಎಸ್ಪಿ. ಅಬ್ದುಲ್‍ರೆಹಮಾನ್, ನಿವೃತ್ತ ಸಬ್‍ಇನ್ಸ್‍ಪೆಕ್ಟರ್ ನಾಗರಾಜ್, ಉರ್ದು ಇ.ಸಿ.ಓ. ಸಮೀರ, ಶಬ್ಬೀರ್ ಅಹಮದ್ ಇವರುಗಳು ವೇದಿಕೆಯಲ್ಲಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















