ಹಿರಿಯೂರು, ಫೆಬ್ರವರಿ. 20: ರಾಜ್ಯದಲ್ಲಿ ಸಮಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಒಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಮಾನಮನಸ್ಕರ ಜೊತೆ ಸಂವಾದ ಕಾರ್ಯಕ್ರಮ ಕುರಿತು ಮಾತನಾಡಿದರು.
ನಾನು ಕಳೆದ 20 ವರ್ಷಗಳಿಂದ ರಂಗಭೂಮಿ ಕಲಾವಿದನಾಗಿ, ನಟನಾಗಿ ಅಭಿನಯಿಸುವ ಜೊತೆಗೆ 14 ವರ್ಷಗಳಿಂದ ಚಳುವಳಿ ಹೋರಾಟ ರೂಪಿಸಿಕೊಂಡು ಬಂದಿದ್ದೇನೆ. ಈಗಾಗಲೇ ರಾಜ್ಯದ 45 ಕ್ಷೇತ್ರಗಳಲ್ಲಿ ಚಳುವಳಿ ಹೋರಾಟಗಾರ ಜೊತೆ ಪ್ರವಾಸ ಕೈಗೊಂಡಿದ್ದೇನೆ ಎಂದರು.
ಕರ್ನಾಟಕಕ್ಕೆ ಪರ್ಯಾಯ ರಾಜಕಾರಣ ವ್ಯವಸ್ಥೆಯ ಅವಶ್ಯಕತೆ ಇದೆ.ನಮ್ಮ ಶತ್ರುವಾಗಿರುವ ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಹೋರಾಡಬೇಕಿದೆ. ರಾಜಕಾರಣಿಗಳು ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿರುವ ದುರಂತವಾಗಿದೆ. ಕರ್ನಾಟಕದ ಚೌಕಟ್ಟಿನಲ್ಲಿ ಬಹುಜನ ಕಲ್ಪನೆ, ಸಾಮಾಜಿಕ ನ್ಯಾಯದ ಮೂಲಕ ಬ್ರಾಹ್ಮಣ್ಯ ವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಶಿಕ್ಷಣದಿಂದ ವಂಚಿತರಾಗಿರುವ ಅಲೆಮಾರಿಗಳನ್ನು ಶಿಕ್ಷಣದ ಕಡೆಗೆ ಕೊಂಡೊಯ್ಯುವ ಕೆಲಸವಾಗಬೇಕು.
ಲಾಭಕ್ಕಾಗಿರುವ ಬಂಡವಾಳ ಶಾಹಿ ವಿರುದ್ಧ ನಾವು ಸಿಡಿದೇಳಬೇಕು. ಬೆಂಗಳೂರಿನಲ್ಲಿ ಸೂಟ್ ಬೂಟು ಧರಿಸಿ ಇಂಗ್ಲಿಷ್ ಮಾತಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇಂತವರ ವಿರುದ್ಧವೂ ನಾವು ಚಳುವಳಿ ಆರಂಭಿಸಬೇಕು. ಬೆಂಗಳೂರು ಮಾತ್ರವಲ್ಲ, ಮದ್ಯ ಕರ್ನಾಟಕ ಸೇರಿದಂತೆ ಅಖಂಡ ಕರ್ನಾಟಕದ ಬೆಳವಣಿಯಾಗಬೇಕು. ಕನ್ನಡ ಭಾಷೆಯ ಜೊತೆಗೆ ಧ್ವಜಗಳ ಮತ್ತು ಭಾಷಾ ಸಮಾನತೆಯ ಜಾನಪದ ಸಾಂಸ್ಕೃತಿಕಗಳ ತಳಮಟ್ಟದಿಂದ ಭಾಷೆಯನ್ನು ಏರಿಸಬೇಕು. ನಾಡು ಉಳಿಯಲು ಕಾಡನ್ನು ರಕ್ಷಿಸಿ ಪರಿಸರ ಉಳಿಸಬೇಕು. ಹಣವಂತರ ಮಕ್ಕಳು ಮಾತ್ರ ಬೆಳೆಯುತ್ತಿದ್ದಾರೆ. ಆರೋಗ್ಯ ಮತ್ತು ಶಿಕ್ಷಣದಲ್ಲಿ ಪರಿವರ್ತನೆ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಕೃಷ್ಣಪ್ಪ, ಬಸವರಾಜ್, ದಾದಾ ಪೀರ್, ಜಾಕೀರ್, ರಹಮತ್, ರಾಜಣ್ಣ , ಸೋಮಶೇಖರ್, ಪಾತಲಿಂಗಪ್ಪ, ಮಂಜುನಾಥ್, ರವಿಕುಮಾರ್, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
















