ಬೆಂಗಳೂರು; ನಂದಿನಿ ಹಾಲು ಉತ್ಪನ್ನದಿಂದ ಅದೆಷ್ಟೋ ರೈತರು ಈಗಲೂ ಉಸಿರಾಡುತ್ತಿದ್ದಾರೆ. ಅದಷ್ಟೇ ಅಲ್ಲ ನಂದಿನಿ ಎಂದಾಕ್ಷಣ ನಮ್ಮದು ಎಂಬ ಭಾವನೆ ಬರುತ್ತದೆ. ಈಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಹಿಂದೆ ನಂದಿನಿ ಉಳಿವಿಗಾಗಿ ಜೋರು ಹೋರಾಟವನ್ನೇ ಮಾಡಿದ್ದರು. ಆದರೆ ಈಗ ಸರ್ಕಾರದ ನಡೆಯಿಂದ ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಮೂಲ್ ಉತ್ಪನ್ನಗಳಿಗೆ ಸರ್ಕಾರ ಹೆಚ್ಚು ಒತ್ತು ಕೊಡ್ತಾ ಇದ್ಯಾ ಎಂಬ ಪ್ರಶ್ನೆ ಎದುರಾಗಿದೆ.

ಈ ರೀತಿ ಪ್ರಶ್ನೆ ಎದುರಾಗುವುದಕ್ಕೆ ಕಾರಣ, ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಗೆ ಅವಕಾಶ ನೀಡುತ್ತಾ ಇರುವುದು. ಬೆಂಗಳೂರಿನ ಮೆಟ್ರೋಗಳಲ್ಲಿ ಅಮೂಲ್ ಕಿಯೋಸ್ಕ್ ಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಅದರಲ್ಲೂ ಹತ್ತು ಮೆಟ್ರೋ ಸ್ಟೇಷನ್ ಗಳಲ್ಲಿ ಅಮೂಲ್ ಕಿಯೋಸ್ಕ್ ಗಳನ್ನ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ ಎನ್ನಲಾಗಿದೆ. ಇದರಿಂದ ನಂದಿನಿ ಉತ್ಪನ್ನಗಳನ್ನ ಕಡೆಗಣಿಸಿತಾ ಎಂಬಂತ ಪ್ರಶ್ನೆಗಳು ಕಾಡುತ್ತಿದೆ.
ಈಗಾಗಲೇ ಈ ಒಪ್ಪಂದಕ್ಕೆ ಬಿಎಂಆರ್ಸಿಎಲ್ ಹಾಗೂ ಅಮೂಲ್ ಸಹಿ ಕೂಡ ಹಾಕಿದ್ದಾರೆ ಎನ್ನಲಾಗಿದೆ. ಇಂದಿರಾ ನಗರ, ಬೆನ್ನಿಗಾನಹಳ್ಳಿ, ಬೈಯ್ಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ಕೆಂಪೇಗೌಡ ಸ್ಟೇಷನ್, ನ್ಯಾಷನಲ್ ಕಾಲೇಜು, ಜಯನಗರ, ಜೆಪಿ ನಗರ ಬ್ಲಾಕ್ ಗಳಲ್ಲಿ ಅಮೂಲ್ ಕಿಯೋಸ್ಕ್ ಗಳನ್ನ ಹಾಕಲು ಅನುವು ಮಾಡಿಕೊಡುತ್ತಿದೆ. ಹಾಲು, ಚಾಕಲೇಟ್, ಐಸ್ ಕ್ರೀಂ ಹಾಗೂ ಹಲವು ಬಗೆಯ ತಿಂಡಿಗಳು ಇಲ್ಲಿ ದೊರೆಯುತ್ತವೆ. ಪ್ರಯಾಣಿಕರು ಇದನ್ನು ಖರೀದಿಸಬಹುದಾಗಿದೆ. ಇದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ನಂದಿನಿಯಲ್ಲಿಯೇ ಎಲ್ಲಾ ಥರಹದ ತಿಂಡಿ, ತಿನಿಸುಗಳು ಸಿಗುವಾಗ ಅಮುಲ್ ಗೆ ಅವಕಾಶ ಕೊಟ್ಟಿದ್ಯಾಕೆ ಎಂಬ ಆಕ್ರೋಶ ಜನರಲ್ಲಿದೆ.



















