ಚಿತ್ರದುರ್ಗ.ಆ.17: ನಗರದ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಬೋಧನಾ ಆಸ್ಪತ್ರೆಯಲ್ಲಿ (ಚಿಮ್ಸ್) 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಯುವರಾಜ್ ಬಿ. ವೈ. ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಜಿಲ್ಲಾಆಸ್ಪತ್ರೆ ಹಸ್ತಾಂತರಗೊಂಡ ನಂತರ ಗುಣಮಟ್ಟದ ಔಷಧ, ಕ್ಲಿನಿಕಲ್ ನೈರ್ಮಲ್ಯ, ಆನ್‍ಲೈನ್ ನೋಂದಣಿ, ಸಿಸಿಟಿವಿ ಭದ್ರತೆ ಹಾಗೂ ಆಧುನಿಕ ಶಸ್ತ್ರಚಿಕಿತ್ಸಾ ಉಪಕರಣಗಳ ಅಳವಡಿಕೆಯಲ್ಲಿ ಮಹತ್ತರ ಪ್ರಗತಿಯಾಗಿದೆ. ಸಂಸ್ಥೆಯಲ್ಲಿ 450 ಎಂ.ಬಿ.ಬಿ.ಎಸ್ ಹಾಗೂ 360 ನಸಿರ್ಂಗ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಶೇ. 97ರಷ್ಟು ಫಲಿತಾಂಶ ದಾಖಲಾಗಿದೆ. ಟ್ವಿನ್ ಶೇರಿಂಗ್ ಆಧಾರದಲ್ಲಿ 400 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಬಸ್ ಪ್ರಯಾಣಕ್ಕೆ ಕೆ.ಎಸ್.ಆರ್.ಟಿ.ಸಿ ಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.180 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ ಹಾಗೂ ಹಾಲಿ ಇರುವ ಆಸ್ಪತ್ರೆಯ ದುರಸ್ತಿ ಮತ್ತು ನವೀಕರಣ ಕೈಗೊಳ್ಳಲಾಗುತ್ತಿದೆ. ರೋಗಿಗಳ ಸುರಕ್ಷತೆಗಾಗಿ 50 ಗೃಹರಕ್ಷಕ ದಳದ ಸಿಬ್ಬಂದಿ ನೇಮಕ ಹಾಗೂ ದಿನಕ್ಕೆ 3 ಬಾರಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ. ಪರಮಾನಂದರೆಡ್ಡಿ ಅವರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಮಹಾತ್ಮ ಗಾಂಧೀಜಿ ಹಾಗೂ ಚಂದ್ರಶೇಖರ ಆಜಾದ್ ಅವರ ಹೋರಾಟಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗ್ರೂಪ್-ಡಿ ನೌಕರರು ಮತ್ತು ನಾನ್-ಕ್ಲಿನಿಕಲ್ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ವೈದ್ಯಕೀಯ ಅಧೀಕ್ಷಕರಾದ ಡಾ. ಮೇಘ ಜಿ.ಹೆಚ್., ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರವೀಂದ್ರ, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಚಂದ್ರಿಕಾ ಎನ್., ಆರ್ಥಿಕ ಸಲಹೆಗಾರರಾದ ಶ್ರೀ ಎಸ್.ವಿ. ವಿಶ್ವಾಸ್, ಆಡಳಿತಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಜಿ. ವಂದನಾರ್ಪಣೆ ಮಾಡಿದರು.









