ಕೊಪ್ಪಳ ಆಗಸ್ಟ್: ಮನುಷ್ಯ ತನ್ನ ದುಶ್ಚಟಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಕುಟುಂಬದಲ್ಲಿ ನೆಮ್ಮದಿ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆಡಳಿತ ಹಾಗೂ ಕೊಪ್ಪಳ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ (ಆಗಸ್ಟ್ 16) ಹಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮದ್ಯಮುಕ್ತ ಹಟ್ಟಿ ಗ್ರಾಮಕ್ಕೆ ‘ಸಂಯಮ ಪ್ರಶಸ್ತಿ’ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಕ್ಕಳಿಗೆ ಪೋಷಕರೇ ಮಾದರಿಯಾಗಬೇಕು: ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನೊಬ್ಬನ ನಿದರ್ಶನ ನೀಡಿದ ಶ್ರೀಗಳು, “ಹಿರಿಯರು ದುಶ್ಚಟಗಳಿಂದ ದೂರವಿದ್ದರೆ ಮುಂದಿನ ಪೀಳಿಗೆ ಸನ್ಮಾರ್ಗದಲ್ಲಿ ಸಾಗುತ್ತದೆ. ಮಕ್ಕಳು ನಾವು ಹೇಳಿದಂತೆ ಕೇಳುವುದಕ್ಕಿಂತ ನಾವು ನಡೆದಂತೆ ಕಲಿಯುತ್ತಾರೆ. ತಂದೆ-ತಾಯಿಗಳು ಮಕ್ಕಳಿಗೆ ಆದರ್ಶಪ್ರಾಯರಾಗಿ ಬದುಕಬೇಕು ಎಂದರು.
ಯಾರೋ ಬಲವಂತ ಮಾಡಿದ್ದಕ್ಕೋ ಅಥವಾ ಗುಡಿ-ಗುಂಡಾರಗಳಿಗೆ ಹೋಗಿ ಆಣೆ ಮಾಡುವುದರಿಂದಲೋ ವ್ಯಸನ ಮುಕ್ತರಾಗಲು ಸಾಧ್ಯವಿಲ್ಲ. ಮದ್ಯಪಾನದಿಂದ ಕುಟುಂಬ ಹಾಗೂ ಆರೋಗ್ಯ ಹಾಳಾಗುತ್ತದೆ ಎಂಬ ಅರಿವು ವ್ಯಕ್ತಿಯ ಮನಸ್ಸಿನಲ್ಲೇ ಮೂಡಬೇಕು. ನಮ್ಮ ಅರಿವೇ ನಮಗೆ ಗುರುವಾಗಿರಬೇಕು. ಗ್ರಾಮಗಳಲ್ಲಿ ಮದ್ಯದ ಹರಾಜು ಕೂಗಿ ಬಂದ ಹಣದಿಂದ ಕಲ್ಲಿನ ದೇವಸ್ಥಾನ ಕಟ್ಟುವುದು ಸರಿಯಲ್ಲ. ಜೀವಂತ ದೇವರಂತಿರುವ ಮನುಷ್ಯರನ್ನು ಹಾಗೂ ಕುಟುಂಬಗಳನ್ನು ಉಳಿಸುವುದು ಮುಖ್ಯ. ದುಶ್ಚಟಗಳನ್ನು ತ್ಯಜಿಸಿದರೆ ಮನೆಯೇ ದೇವಸ್ಥಾನವಾಗುತ್ತದೆ ಎಂದು ಹೇಳಿದರು.
ಪ್ರಶಸ್ತಿ ಮೊತ್ತದ ಸದ್ಬಳಕೆಗೆ ಸಲಹೆ: ಮದ್ಯಪಾನ ಸಂಯಮ ಮಂಡಳಿಯಿAದ ಹಟ್ಟಿ ಗ್ರಾಮಕ್ಕೆ ನೀಡಲಾದ ರೂ. 1 ಲಕ್ಷ ಪ್ರಶಸ್ತಿ ಮೊತ್ತವನ್ನು ಗ್ರಾಮದ ಹಿರಿಯರು ಮತ್ತು ಶಿಕ್ಷಕರ ಜಂಟಿ ಖಾತೆಯಲ್ಲಿ ಎಫ್ಡಿಯಾಗಿ ಇಡಬೇಕು. ಅದರಿಂದ ಬರುವ ವಾರ್ಷಿಕ ಬಡ್ಡಿಯನ್ನು ಗ್ರಾಮದ ಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಯ ಮುಂದಿನ ವ್ಯಾಸಂಗಕ್ಕೆ ಪ್ರೋತ್ಸಾಹಧನವಾಗಿ ನೀಡುವಂತೆ ಶ್ರೀಗಳು ಸಲಹೆ ಮಾಡಿದರು.
ಮಹಿಳೆಯರ ಹಾಗೂ ಗ್ರಾಮಸ್ಥರ ಒಗ್ಗಟ್ಟಿಗೆ ಪ್ರಶಂಸೆ: ಹಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕಾಮನೂರು, ಲೇಬಗೇರಿ, ಚಿಕ್ಕೇನಕೊಪ್ಪ ಮೊದಲಾದ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧಿಸಲು ಶ್ರಮಿಸಿದ ತಾಯಂದಿರು, ಯುವಕರು ಮತ್ತು ಗಾಂಧಿ ಬಳಗದ ಒಗ್ಗಟ್ಟಿನ ಕಾರ್ಯವನ್ನು ಶ್ರೀಗಳು ಶ್ಲಾಘಿಸಿದರು










