ನವದೆಹಲಿ : ವಿವಾಹಿತ ಮಹಿಳೆಯರಿಗೆ ಇರುವ 500 ಗ್ರಾಂ ಚಿನ್ನದ ಮಿತಿಯು ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಆಭರಣಗಳ ಮೂಲವನ್ನು ವಿವರಿಸುವುದರಿಂದ ಸ್ವಯಂಚಾಲಿತವಾಗಿ ವಿನಾಯಿತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಆದಾಯ ತೆರಿಗೆ ದಾಳಿ ವೇಳೆ ಜಪ್ತಿಯಿಂದ ರಕ್ಷಣೆ ಸಿಗುತ್ತದೆ ಎಂಬ ಮಾತ್ರಕ್ಕೆ ಚಿನ್ನದ ಮೂಲವನ್ನು ವಿವರಿಸುವ ಅಗತ್ಯವಿಲ್ಲ ಎಂದು ಅರ್ಥವಲ್ಲ ಎಂಬುದನ್ನು ನ್ಯಾಯಾಲಯ ಒತ್ತಿಹೇಳಿದೆ.
ಪ್ರಕರಣದ ಹಿನ್ನೆಲೆ

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಫುಲ್ಪಾರಿ ಕುಮಾರಿ ವಿರುದ್ಧ ದಾಖಲಾದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿವಾದ ಸೃಷ್ಟಿಯಾಗಿದೆ. 2015ರ ಮೇ 11ರಂದು ಬಿಹಾರ ವಿಜಿಲೆನ್ಸ್ ಪೊಲೀಸರು ಕುಮಾರಿ ಮತ್ತು ಆಕೆಯ ಪತಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಅಡಿ ಎಫ್ಐಆರ್ ದಾಖಲಿಸಿದ್ದರು. ತಿಳಿದಿರುವ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ, ಚಿನ್ನ ಅಥವಾ ನಗದನ್ನು ಹೊಂದಿರುವ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿತ್ತು. ತನಿಖೆಯ ನಂತರ 2020ರ ಜುಲೈ 29ರಂದು ವಿಜಿಲೆನ್ಸ್ ಇಲಾಖೆಯು ಕುಮಾರಿ ವಿರುದ್ಧ ಮಾತ್ರ ಚಾರ್ಜ್ ಶೀಟ್ ಸಲ್ಲಿಸಿತ್ತು. ಬಳಿಕ 2021ರ ಜನವರಿ 28ರಂದು ಪಾಟ್ನಾದ ವಿಶೇಷ ವಿಜಿಲೆನ್ಸ್ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು.
ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕುಮಾರಿ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದರು. 1994ರ ಮೇ 11ರ ಸಿಬಿಡಿಟಿ ಮಾರ್ಗಸೂಚಿ ಮತ್ತು 2016ರ ಡಿಸೆಂಬರ್ 1ರ ಹಣಕಾಸು ಸಚಿವಾಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ವಿವಾಹಿತ ಮಹಿಳೆ 500 ಗ್ರಾಂ, ಅವಿವಾಹಿತ ಮಹಿಳೆ 250 ಗ್ರಾಂ ಹಾಗೂ ಪುರುಷರು 100 ಗ್ರಾಂ ಚಿನ್ನ ಹೊಂದುವುದು ಕಾನೂನುಬದ್ಧವಾಗಿದೆ ಮತ್ತು ತೆರಿಗೆ ದಾಳಿಯ ವೇಳೆ ಇದನ್ನು ಜಪ್ತಿ ಮಾಡುವಂತಿಲ್ಲ ಎಂದು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ್ದ ಪಾಟ್ನಾ ಹೈಕೋರ್ಟ್, 2026ರ ಮೇ 14ರಂದು ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು.
ಆದರೆ, 2026ರ ನವೆಂಬರ್ 2ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅರುಣ್ ಪಲ್ಲಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಹೈಕೋರ್ಟ್ ತೀರ್ಪನ್ನು ಬದಿಗೊತ್ತಿದೆ. ಕೇವಲ ಸುತ್ತೋಲೆಗಳು ಮತ್ತು ಪತ್ರಿಕಾ ಪ್ರಕಟಣೆಗಳನ್ನು ಆಧರಿಸಿ ಚಿನ್ನವನ್ನು ಹೊಂದಲು ಅವಕಾಶವಿದೆ ಎಂದು ತೋರಿಸುವುದು, ಆಸ್ತಿಯ ಮೂಲವನ್ನು ವಿವರಿಸಿದಂತೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪ ಎದುರಿಸುತ್ತಿರುವವರು ತಮ್ಮ ಆಸ್ತಿಯ ಮೂಲವನ್ನು ಕಡ್ಡಾಯವಾಗಿ ವಿವರಿಸಬೇಕು ಎಂದು ತಿಳಿಸಿ, ಪ್ರಕರಣವನ್ನು ಮರುಸ್ಥಾಪಿಸಿದೆ.

ಕಾನೂನು ತಜ್ಞರ ಪ್ರಕಾರ, ಸುಪ್ರೀಂ ಕೋರ್ಟ್ನ ಈ ಆದೇಶವು ನೇರವಾಗಿ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಭಾಗಿಯಾದ ಸರ್ಕಾರಿ ನೌಕರರಿಗೆ ಸಂಬಂಧಿಸಿದೆ. ಹೀಗಾಗಿ ಸಾಮಾನ್ಯ ಕುಟುಂಬಗಳು ಆತಂಕಪಡುವ ಅಗತ್ಯವಿಲ್ಲ. ಸಿಬಿಡಿಟಿ ಮಾರ್ಗಸೂಚಿಗಳು ಕೇವಲ ಆದಾಯ ತೆರಿಗೆ ದಾಳಿ ವೇಳೆ ಜಪ್ತಿಯಿಂದ ರಕ್ಷಣೆಯನ್ನಷ್ಟೇ ನೀಡುತ್ತವೆ. ಅದು ಒಡೆತನದ ಮಿತಿಯಲ್ಲ ಅಥವಾ ಚಿನ್ನದ ಮೂಲವನ್ನು ವಿವರಿಸುವುದರಿಂದ ನೀಡಲಾದ ವಿನಾಯಿತಿಯಲ್ಲ. ಯಾವುದೇ ವ್ಯಕ್ತಿ ತಾನು ಹೊಂದಿರುವ ಚಿನ್ನದ ಮೂಲವನ್ನು ವಿವರಿಸುವ ಸಾಮರ್ಥ್ಯ ಹೊಂದಿದ್ದರೆ, ಮಿತಿಗಿಂತ ಹೆಚ್ಚಿನ ಚಿನ್ನವನ್ನು ಕೂಡ ಕಾನೂನುಬದ್ಧವಾಗಿ ಹೊಂದಬಹುದಾಗಿದೆ.
ಮಹಿಳೆಯರು ತಮ್ಮ ಬಳಿ ಇರುವ ಚಿನ್ನದ ಮೂಲವನ್ನು ದೃಢೀಕರಿಸಲು ಲಭ್ಯವಿರುವ ಖರೀದಿ ರಸೀದಿಗಳು, ಪಾವತಿ ದಾಖಲೆಗಳು, ಆನುವಂಶಿಕ ದಾಖಲೆಗಳು, ಉಯಿಲು, ಉಡುಗೊರೆ ದಾಖಲೆಗಳು ಮತ್ತು ಮದುವೆಯ ಫೋಟೋಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಸೂಕ್ತ. ಆದರೆ, ಹಳೆಯ ಅಥವಾ ಪಿತ್ರಾರ್ಜಿತವಾಗಿ ಬಂದ ಪ್ರತಿಯೊಂದು ಆಭರಣಕ್ಕೂ ರಸೀದಿ ಇರಲೇಬೇಕು ಎಂಬ ಕಡ್ಡಾಯವೇನಿಲ್ಲ. ಸುಪ್ರೀಂ ಕೋರ್ಟ್ ಆದೇಶವು ಯಾವುದೇ ಹೊಸ ದಾಖಲಾತಿ ನಿಯಮಗಳನ್ನು ಸೃಷ್ಟಿಸಿಲ್ಲ. ದಾಖಲೆಗಳಿಲ್ಲದ ಮಾತ್ರಕ್ಕೆ ಚಿನ್ನ ಅಕ್ರಮವಾಗುವುದಿಲ್ಲ. ಹಾಗೆಯೇ, 500 ಗ್ರಾಂ ಮಿತಿಯೊಳಗಿದೆ ಎಂಬ ಕಾರಣಕ್ಕೆ ಪರಿಶೀಲನೆ ವೇಳೆ ಚಿನ್ನದ ಮೂಲವನ್ನು ವಿವರಿಸುವ ಅಗತ್ಯವಿಲ್ಲ ಎಂದು ಪರಿಗಣಿಸಲಾಗುವುದಿಲ್ಲ. ಅಗತ್ಯ ಬಿದ್ದಾಗ ವೃತ್ತಿಪರರ ಸಲಹೆ ಪಡೆಯುವುದು ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.









