Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂಟರ್ನೆಟ್ ಬಳಕೆ ಮಕ್ಕಳ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Internet use is a fundamental right of children Supreme Court landmark judgment
---Advertisement---

ನವದೆಹಲಿ : ಇಂಟರ್ನೆಟ್ (Internet) ಸಂಪರ್ಕ ಹಾಗೂ ಬಳಕೆಯು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದ್ದು, ಇದು ಮಕ್ಕಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ.

ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಮತ್ತು 19(1)(ಎ) ವಿಧಿ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಅಡಿಯಲ್ಲಿ ಇಂಟರ್ನೆಟ್ ಬಳಕೆಯು ಪ್ರತಿಯೊಬ್ಬ ನಾಗರಿಕನ ಹಕ್ಕಿನ ಭಾಗವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಅವರನ್ನು ಸಂಪೂರ್ಣವಾಗಿ ಇಂಟರ್ನೆಟ್‌ನಿಂದ ದೂರವಿಡುವುದು ಸಮಂಜಸವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಇಂಟರ್ನೆಟ್ ವೇದಿಕೆಗಳಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣಾತ್ಮಕ ಕಂಟೆಂಟ್ (CSEAM) ಪತ್ತೆಹಚ್ಚಿ ತೆಗೆದುಹಾಕುವ ಕಾರ್ಯವಿಧಾನವನ್ನು ಬಲಪಡಿಸಲು ನಿರ್ದೇಶನಗಳನ್ನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಈ ಅವಲೋಕನ ಮಾಡಿದೆ.

ಮಕ್ಕಳ ಸ್ವಾತಂತ್ರ್ಯ ಮತ್ತು ಸುರಕ್ಷತೆ ಎರಡೂ ಅತ್ಯಗತ್ಯ

ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿದ ನ್ಯಾಯಪೀಠ, ಇಂಟರ್ನೆಟ್ ಸಂಪರ್ಕವನ್ನು ಹೊಂದುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದೆ. ವಯಸ್ಸಿನ ಭೇದವಿಲ್ಲದೆ ಮಕ್ಕಳು ಈ ಹಕ್ಕುಗಳನ್ನು ಅನುಭವಿಸಲು ಅರ್ಹರಾಗಿದ್ದಾರೆ. ಒಂದು ನಿರ್ದಿಷ್ಟ ವಯಸ್ಸಿನ ಕೆಳಗಿನ ಮಕ್ಕಳಿಗೆ ರಕ್ಷಿಸಬೇಕಾದ ಆತ್ಮಸಾಕ್ಷಿ ಇಲ್ಲ ಅಥವಾ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎಂದು ಹೇಳುವುದು ಎಷ್ಟು ಅಸಂಬದ್ಧವೋ, ಮಕ್ಕಳನ್ನು ಇಂಟರ್ನೆಟ್‌ನಿಂದ ಸಂಪೂರ್ಣವಾಗಿ ವಂಚಿಸುವುದೂ ಅಷ್ಟೇ ಅಸಂಬದ್ಧ. ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಪರಸ್ಪರ ವಿರುದ್ಧವಲ್ಲ, ಮಕ್ಕಳು ಈ ಎರಡಕ್ಕೂ ಅರ್ಹರು ಎಂದು ಕೋರ್ಟ್ ಒತ್ತಿಹೇಳಿದೆ.

ಇಂಟರ್ನೆಟ್ ಎನ್ನುವುದು ಕೇವಲ ಮಾಹಿತಿಯ ಆಗರವಷ್ಟೇ ಅಲ್ಲದೆ ವಿಚಾರಗಳು ಮತ್ತು ಸೃಜನಶೀಲತೆಯ ಪ್ರಮುಖ ತಾಣವಾಗಿದೆ. ದೂರದ ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳಿಗೆ ಕಲಿಕೆ ಮತ್ತು ಮಾಹಿತಿಗಾಗಿ ಇಂಟರ್ನೆಟ್ ಏಕೈಕ ಆಧಾರವಾಗಿದೆ. ಅಷ್ಟೇ ಅಲ್ಲದೆ, ವಿಶೇಷ ಚೇತನ ಮಕ್ಕಳಿಗೆ ತಮ್ಮಂತೆಯೇ ಇರುವ ಇತರರೊಂದಿಗೆ ಒಡನಾಟ ಬೆಳೆಸಲು ಮತ್ತು ಸಂವಹನ ನಡೆಸಲು ಇದು ಬಹುಮುಖ್ಯ ವೇದಿಕೆಯಾಗಿದೆ ಎಂದು ಪೀಠ ನುಡಿದಿದೆ.

ಸಂಪೂರ್ಣ ನಿಷೇಧ ಪರಿಹಾರವಲ್ಲ

ಮಕ್ಕಳ ಪಾಲಿಗೆ ಇಂದಿನ ಇಂಟರ್ನೆಟ್ ಸಂಪೂರ್ಣ ಸುರಕ್ಷಿತವಾಗಿಲ್ಲ ಎಂಬುದನ್ನು ಒಪ್ಪಿಕೊಂಡ ನ್ಯಾಯಾಲಯ, ಹಾನಿಕಾರಕ ಕಂಟೆಂಟ್‌ಗಳನ್ನು ನಿಯಂತ್ರಿಸಲು ಮಧ್ಯವರ್ತಿ ಸಂಸ್ಥೆಗಳು ವಿಫಲವಾಗಿವೆ ಎಂಬ ಕಾರಣಕ್ಕೆ ಮಕ್ಕಳನ್ನೇ ದೂರವಿಡುವುದು ಸಂತ್ರಸ್ತರನ್ನೇ ತಪ್ಪಿತಸ್ಥರನ್ನಾಗಿ ಮಾಡಿದಂತೆ ಎಂದು ಎಚ್ಚರಿಸಿದೆ. ಕಾನೂನು ನಿರ್ಬಂಧ ಹೇರಿದ ತಕ್ಷಣ ಮಕ್ಕಳು ಇಂಟರ್ನೆಟ್ ಬಳಸುವುದನ್ನು ನಿಲ್ಲಿಸುವುದಿಲ್ಲ. ಬದಲಿಗೆ, ನಿಯಂತ್ರಣವಿಲ್ಲದ ಹಾಗೂ ಇನ್ನಷ್ಟು ಅಪಾಯಕಾರಿಯಾದ ವೆಬ್‌ಸೈಟ್‌ಗಳ ಮೊರೆ ಹೋಗುವ ಸಾಧ್ಯತೆ ಇರುತ್ತದೆ.

ಇದಲ್ಲದೆ, ಕಠಿಣ ನಿರ್ಬಂಧಗಳು ಇದ್ದಾಗ ಆನ್‌ಲೈನ್‌ನಲ್ಲಿ ಬೆದರಿಕೆ ಅಥವಾ ಆಮಿಷಕ್ಕೆ ಒಳಗಾಗುವ ಮಕ್ಕಳು, ಪೋಷಕರು ಎಲ್ಲಿ ಬೈಯುತ್ತಾರೋ ಎಂಬ ಭಯದಿಂದ ತಮಗಾದ ಅನ್ಯಾಯವನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಮಕ್ಕಳ ಮೇಲೆ ಇಂಟರ್ನೆಟ್ ಬಳಕೆಗೆ ಹೇರುವ ಸಂಪೂರ್ಣ ನಿಷೇಧವು ಯಾವುದೇ ಫಲ ನೀಡದ ಕ್ರಮವಾಗಿದ್ದು, ಇಂತಹ ಕ್ರಮಗಳಿಂದ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಜಗತ್ತಿನ ಯಾವುದೇ ಭಾಗದಲ್ಲೂ ಸಾಬೀತಾಗಿಲ್ಲ ಎಂದು ಕೋರ್ಟ್ ಹೇಳಿದೆ. ವಯಸ್ಸಿನ ಪರಿಶೀಲನೆಯ ಹೆಸರಿನಲ್ಲಿ ಬಳಕೆದಾರರ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ನಿರಂತರವಾಗಿ ಸಂಗ್ರಹಿಸುವುದು ಅನಗತ್ಯ ನಿಗಾ ಮತ್ತು ದುರುಪಯೋಗಕ್ಕೆ ಕಾರಣವಾಗಬಹುದು ಎಂದೂ ಕಳವಳ ವ್ಯಕ್ತಪಡಿಸಿದೆ.

Join WhatsApp

Join Now

Join Telegram

Join Now